
ಬೆಂಗಳೂರು : ಈಗಾಗಲೇ ಬೆಲೆ ಏರಿಕೆ, ತೆರಿಗೆ ಹೆಚ್ಚಳದಿಂದ ತತ್ತರಿಸುತ್ತಿರುವ ಶ್ರೀಸಾಮಾನ್ಯನಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಬರುವ ಮಾರ್ಚ್ ತಿಂಗಳಲ್ಲಿ ವಿದ್ಯುತ್ ದರ ಏರಿಕೆಯ ಭರ್ಜರಿ ಶಾಕ್ ನೀಡುವ ಸಾಧ್ಯತೆ ಇದೆ. ಅದರಲ್ಲೂ ಒಂದು ವರ್ಷದ ಬದಲಿಗೆ ಮುಂದಿನ ಮೂರು ವರ್ಷಗಳ ದರ ಏರಿಕೆಯನ್ನು ಒಮ್ಮೆಗೆ ನಿರ್ಧಾರ ಮಾಡಿ ಬಳಕೆದಾರರಿಗೆ ತ್ರಿಬಲ್ ಶಾಕ್ ನೀಡುವ ಸಾಧ್ಯತೆ ಇದೆ.
ಬೆಸ್ಕಾಂ ಸೇರಿ ವಿವಿಧ ಎಸ್ಕಾಂಗಳು ಈಗಾಗಲೇ ಕನಿಷ್ಠ 39 ಪೈಸೆಯಿಂದ ಹಿಡಿದು ಗರಿಷ್ಠ 1.32 ರೂ.ವರೆಗೆ ದರ ಹೆಚ್ಚಳ ಕೋರಿ ಕೆಇಆರ್ಸಿಗೆ ಪ್ರಸ್ತಾಪ ಸಲ್ಲಿಸಿವೆ. ಈ ಕುರಿತು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಲಿರುವ ಕೆಇಆರ್ಸಿ ಏ.1 ರಿಂದ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಿ ವಿದ್ಯುತ್ ಗ್ರಾಹಕರಿಗೆ ಶಾಕ್ ನೀಡಲಿದೆ.
ಬೆಸ್ಕಾಂ ಸೇರಿ ರಾಜ್ಯದ ವಿವಿಧ ಎಸ್ಕಾಂಗಳು ಮುಂದಿನ ಮೂರು ವರ್ಷಗಳ ಅವಧಿಯ ವಿದ್ಯುತ್ ದರ ಹೆಚ್ಚಳವನ್ನು ಒಂದೇ ಬಾರಿಗೆ ಪ್ರಕಟಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯುನಿಟ್ಗೆ 37 ಪೈಸೆಯಿಂದ ಬರೋಬ್ಬರಿ 1.32 ರು.ವರೆಗೆ ಹೆಚ್ಚಳಕ್ಕೆ ಮನವಿ ಮಾಡಿದೆ.
ಎಸ್ಕಾಂಗಳ ಪ್ರಸ್ತಾವನೆಯ ವಿಚಾರಣೆಯನ್ನು ಕೆಇಆರ್ಸಿ ಮುಗಿಸಿದ್ದು, ಫೆ.27ಕ್ಕೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹವನ್ನೂ ಪೂರ್ಣಗೊಳಿಸಲಿದೆ. ಹೀಗಾಗಿ ಏ.1ರಿಂದ ಅನ್ವಯವಾಗುವಂತೆ ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ವಿದ್ಯುತ್ ದರ ಹೆಚ್ಚಳವನ್ನು ಕೆಇಆರ್ಸಿ ಪ್ರಕಟಿಸಲಿದೆ. ಈ ವೇಳೆ ಮೂರು ವರ್ಷಕ್ಕೂ ಒಮ್ಮೆಯೇ ಹೆಚ್ಚಳ ಮಾಡಲಿದೆಯೇ ಅಥವಾ 2025-26ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ಪ್ರಕಟಿಸಲಿದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ.
ಈ ಪೈಕಿ ಬೆಸ್ಕಾಂ ಬೆಸ್ಕಾಂ ಮುಂದಿನ ಮೂರು ವರ್ಷಗಳ ಕಾಲ ಕ್ರಮವಾಗಿ ಪ್ರತಿ ಯುನಿಟ್ಗೆ 2025-26ನೇ ಸಾಲಿಗೆ 67 ಪೈಸೆ, 2026-27ಕ್ಕೆ 75 ಪೈಸೆ ಹಾಗೂ 2027-28ಕ್ಕೆ 91 ಪೈಸೆಯಂತೆ ದರ ಹೆಚ್ಚಳ ಮಾಡುವಂತೆ ಕೆಇಆರ್ಸಿಗೆ ಮನವಿ ಸಲ್ಲಿಸಿದೆ. ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ (ಸೆಸ್ಕ್) 2025-26ಕ್ಕೆ 68 ಪೈಸೆ, 2026-27ಕ್ಕೆ 1.03 ರೂ, 2027-28ಕ್ಕೆ 1.23 ರೂ., ಮಂಗಳೂರಿನ ಮೆಸ್ಕಾಂ 2025-26ಕ್ಕೆ 70 ಪೈಸೆ, 2026-27ಕ್ಕೆ 0.37 ಪೈಸೆ, 2027-28ಕ್ಕೆ 0.54 ಪೈಸೆ, ಹುಬ್ಬಳ್ಳಿಯ ಹೆಸ್ಕಾಂ 2025-26ಕ್ಕೆ 0.69 ಪೈಸೆ, 2026-27ಕ್ಕೆ 1.18 ರೂ., 2027-28ಕ್ಕೆ 1.32 ರೂ. ಪ್ರತಿ ಯುನಿಟ್ಗೆ ಹೆಚ್ಚಳ ಮಾಡುವಂತೆ ಮನವಿ ಮಾಡಿವೆ.