ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ಹಾಗೂ ಶ್ರೀ ಉಮಾಮಹೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ಮತ್ತು ಅದ್ಧೂರಿಯಾಗಿ ನೆರವೇರಿತು.
ಶ್ರೀ ಬೂದಿಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದೊಂದಿಗೆ ಲೋಕ ಕಲ್ಯಾಣೋತ್ಸವವನ್ನು ಗ್ರಾಮಸ್ಥರು ವಿಜೃಂಭಣೆಯಿಂದ ಆಯೋಜಿಸಿದ್ದರು.
ಈ ಕಾರ್ಯಕ್ರಮವು ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳವರ ಸಮ್ಮುಖದಲ್ಲಿ, ಬಾಳೆಹೊನ್ನೂರು ಶಾಖ ಖಾಸಮಠ, ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಆಶ್ರಯದಲ್ಲಿ ನಡೆದಿದ್ದು, ಮಹಾಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಕೋಸ್ಟಾಂಡ ವೇದನೆ, ಕದಳಿ, ಛೇದನ ಬಲಿ ಸಂಸ್ಕಾರಗಳು ನೆರವೇರಿದ್ದು, ಶ್ರೀ ಸ್ವಾಮಿಗಳಿಗೆ ವಿಶೇಷ ರಾಜಪಂಚಾಚಾರ, ರಾಷ್ಟ್ರ ಶ್ರೀವಾದ, ಅಷ್ಟೋತ್ತರ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಜಾತ್ರೆಯ ಅಂಗವಾಗಿ ಗಂಗಾ ಪೂಜೆ, ಆಲಯ ಪ್ರವೇಶ, ಗಣಪತಿ ಪೂಜೆ, ಧ್ವಜಾರೋಹಣ, ಪುಣ್ಯಾಹವಾಚನ, ಸಮಾರಾಧನೆ, ಪಂಚಕಲಶ, ನವಗ್ರಹ ಮತ್ತು ಅಷ್ಟದಿಕ್ಪಾಲಕರ ಪೂಜೆಗಳು ಭಕ್ತಿಭಾವದಿಂದ ನೆರವೇರಿದವು.
ಉಮಾಮಹೇಶ್ವರ, ಶ್ರೀ ಲಕ್ಷ್ಮೀನಾರಾಯಣ, ಅಷ್ಟಲಕ್ಷ್ಮಿ, ಏಕಾದಶಿ, ರುದ್ರ ಸಪ್ತಶತಿ ದೇವತಾ ಪೂಜೆಗಳು ಹಾಗೂ ಕಲಶ ಸ್ಥಾಪನೆ ಕಾರ್ಯಕ್ರಮಗಳು ನಡೆದವು. ಮಹಾಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ನವಗ್ರಹ ಹೋಮ, ಮೃತ್ಯುಂಜಯ ಹೋಮ ಹಾಗೂ ತೀಲ ಹೋಮಗಳನ್ನು ಶ್ರೀ ಶನೇಶ್ವರ ಸ್ವಾಮಿಗೆ ಸಮರ್ಪಿಸಲಾಯಿತು. ತೋವಿನಕೆರೆ ಗ್ರಾಮದ ರಾಜ ಬೀದಿಗಳಲ್ಲಿ ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಉಮಾಮಹೇಶ್ವರ ಸ್ವಾಮಿಯವರ ವೈಭವದ ಮೆರವಣಿಗೆ ಚೆಂಡೆಮೇಳ, ಭದ್ರಕಾಳಿ ನೃತ್ಯ, ಲಿಂಗವೀರರ ಕುಣಿತ, ನಂದಿಧ್ವಜ ಕುಣಿತಗಳೊಂದಿಗೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ತೋವಿನಕೆರೆ, ಸೂರ್ಯನಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಪುನಸ್ಕಾರಗಳನ್ನು ಭಕ್ತಿಯಿಂದ ನೆರವೇರಿಸಿದರು.
ವರದಿ: ನರಸಿಂಹಯ್ಯ ಹೊಸಕೋಟೆ
