ಹಾಸನ: ಆಶ್ರಯ ಯೋಜನೆಯಡಿ ಹಕ್ಕುಪತ್ರ ಹೊಂದಿರುವ ಮನೆಗಳನ್ನು ಹಾನಿಗೊಳಿಸಿರುವುದನ್ನು ಖಂಡಿಸಿ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಒದಗಿಸುವಂತೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ ಮೂರನೇ ದಿನಕ್ಕೂ ನಗರದ ಡಿಸಿ ಕಚೇರಿ ಆವರಣದಲ್ಲಿ ಮುಂದುವರಿಯಿತು.
ಪ್ರತಿಭಟನಾ ಸ್ಥಳದಲ್ಲೇ ಧನಕರುಗಳಿಗೆ ಮೇವು ನೀಡಿ, ಅಡುಗೆ ವ್ಯವಸ್ಥೆ ಮಾಡಿಕೊಂಡು ರೈತರು ಹೋರಾಟ ನಡೆಸುತ್ತಿರುವುದು ಗಮನ ಸೆಳೆಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಅರಕಲಗೂಡು ತಾಲೂಕಿನ ಎಬಿಎಂ ಹಳ್ಳಿಯ ನಿವಾಸಿಗಳಿಗೆ 1991-92ರಲ್ಲಿ ತಹಶೀಲ್ದಾರ್ ಅವರಿಂದ ಆಶ್ರಯ ಯೋಜನೆ (L&D 37/91-92) ಅಡಿಯಲ್ಲಿ ಕಾನೂನುಬದ್ಧವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು ಎಂದು ಹೇಳಿದರು. ದಶಕಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಜನರಿಗೆ ಯಾವುದೇ ಪೂರ್ವ ನೋಟಿಸ್ ನೀಡದೇ ಮನೆಗಳಿಗೆ ಹಾನಿ ಮಾಡಿರುವುದು ಗಂಭೀರ ಅನ್ಯಾಯ ಎಂದು ಆರೋಪಿಸಿದರು.
ಕೆಲ ಮನೆಗಳ ಗೋಡೆಗಳನ್ನು ಕೆಡವಲಾಗಿದ್ದು, ಕೆಲವು ಮನೆಗಳನ್ನು ತೆರವುಗೊಳಿಸಲು ಯತ್ನಿಸಿರುವುದರಿಂದ ಕುಟುಂಬಗಳು ಆತಂಕದಲ್ಲಿ ದಿನ ಕಳೆಯುವಂತಾಗಿದೆ ಎಂದು ಹೇಳಿದರು. ತಾಲ್ಲೂಕು ಆಡಳಿತವು ಪ್ರಭಾವಿಗಳ ಒತ್ತಡಕ್ಕೆ ಮಣಿದು ಹಕ್ಕುದಾರರ ಮೇಲೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಜಾಗದ ಸರಿಯಾದ ಅಳತೆ ಹಾಗೂ ಗುರುತಿಸುವ ಕೆಲಸ ಮಾಡದೇ ನಿಜವಾದ ಹಕ್ಕುದಾರರಿಗೆ ತೊಂದರೆ ಉಂಟುಮಾಡಲಾಗುತ್ತಿದೆ. ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳದೇ ಅವರಿಗೆ ಸಹಕಾರ ನೀಡುತ್ತಿರುವುದು ಅಸಂವಿಧಾನಿಕ ನಡೆ ಎಂದು ದೂರಿದರು.
ಈ ಘಟನೆ ಮೂಲಭೂತ ಹಕ್ಕುಗಳ ಮೇಲಿನ ಹಲ್ಲೆಯಾಗಿದ್ದು, ಬಡ ಕುಟುಂಬಗಳನ್ನು ಅನಾಥರನ್ನಾಗಿ ಮಾಡುವ ಪ್ರಯತ್ನವಾಗಿದೆ. ತಕ್ಷಣ ಸರ್ಕಾರ ಮತ್ತು ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು:
- ಮನೆಗಳ ಧ್ವಂಸ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು
- ಈಗಾಗಲೇ ಹಾನಿಗೊಳಿಸಿದ ಮನೆಗಳಿಗೆ ಸಮರ್ಪಕ ಪರಿಹಾರ ನೀಡಬೇಕು
- ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
- ಹಕ್ಕುಪತ್ರದ ಆಧಾರದ ಮೇಲೆ ವಾಸಸ್ಥಳವನ್ನು ರಕ್ಷಿಸಬೇಕು
- ಸಾರ್ವಜನಿಕ ಯೋಜನೆಗಾಗಿ ಜಾಗ ಬೇಕಾದರೆ ಕಾನೂನುಬದ್ಧ ಪರಿಹಾರ ಹಾಗೂ ಪುನರ್ವಸತಿ ಒದಗಿಸಬೇಕು
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಸಾದಿಕ್, ಮುಖಂಡರಾದ ಪವಿತ್ರ, ಅಕ್ಮಲ್ ಪಾಷಾ, ವಿಠಲ್ ಸೇರಿದಂತೆ ಹಲವಾರು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.