
“ಫೆಮಿನಿಸ್ಟ್ ಮ್ಯಾನಿಫೆಸ್ಟೊ” ಮಗಳನ್ನು ಬೆಳೆಸಲು ಚಿಮಮಾಂಡಳ 15 ಸಲಹೆಗಳು
ಆಲೋಚನೆಗೆ ಸಿಗದ ಹೊಸ ಯೋಚನೆಗಳನ್ನು ಹೆಣ್ಣು ಮಕ್ಕಳ ಪೋಷಕರು ಮಾಡಬೇಕಾದ ಕರ್ತವ್ಯವನ್ನು ತಿಳಿಸಿರುವ ಬರಹ
ಡಾ.ಕಾವ್ಯಶ್ರೀ ಅವರು, “ಫೆಮಿನಿಸ್ಟ್ ಮ್ಯಾನಿಫೆಸ್ಟೊ”, “ಮಗಳನ್ನು ಬೆಳೆಸಲು ಚಿಮಮಾಂಡಳ 15 ಸಲಹೆಗಳು” ಎಂಬ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅನೇಕ ಆಯಾಮದ ಚಿಂತನೆಯನ್ನು ಆಲೋಚನೆಗೆ ಸಿಗದ ಹೊಸ ಯೋಚನೆಗಳನ್ನು ಹೆಣ್ಣು ಮಕ್ಕಳ ಪೋಷಕರು ಮಾಡಬೇಕಾದ ಕರ್ತವ್ಯವನ್ನು ತಿಳಿಸಿರುವ ಬರಹ ಎಂದು ಹೇಳಬಹುದು.
ರೆಕ್ಕೆಯ ಕಟ್ಟಲು ಬಲ್ಲ, ರೆಕ್ಕೆಯೇ ತಾನಾಗಲೂ ಬಲ್ಲ ಎಲ್ಲ ಅಮ್ಮಂದಿರಿಗೆ ಅಪ್ಪಂದಿರಿಗೆ ಎಂದು ತನ್ನ ಪುಸ್ತಕವನ್ನು ಅರ್ಪಿಸುತ್ತ ಪ್ರಾರಂಭಿಸುವ ಬರವಣಿಗೆ.ಆರಂಭದಲ್ಲಿ ಸ್ವಲ್ಪ ಪೀಠಿಕೆ, ಪರಿಚಯ, “ಸ್ತ್ರೀವಾದದ ಅರ್ಥವನ್ನು ತಿಳಿಸುತ್ತಾ ಸಾಗುತ್ತದೆ.
ನಾನು ಹೆಣ್ಣು ಎಂಬ ಕಾರಣಕ್ಕೆ, ನಾನು ಮದುವೆಯಾಗಬೇಕೆಂದು ನಿರೀಕ್ಷೆ ಹುಟ್ಟಿಸಲಾಗುತ್ತದೆ. ನನ್ನ ಬದುಕಿನ ಬಹುತೇಕ ಆಯ್ಕೆಗಳನ್ನು ಮದುವೆಯೇ ಮುಖ್ಯ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡೇ ಆಲೋಚಿಸುವಂತೆ ಮಾಡುತ್ತದೆ. ಈಗ ಮದುವೆ ಎಂಬುದು ಸಂತೋಷ, ಪ್ರೀತಿ ಮತ್ತು ಪರಸ್ಪರ ಬೆಂಬಲದ ಮೂಲವಾಗಬಹುದು ಎಂಬ ಪಾಠವನ್ನು ಏಕೆ ಹುಡುಗಿಯರಿಗೆ ಮಾತ್ರ ಹೇಳಲಾಗುತ್ತದೆ, ಏಕೆ ಹುಡುಗರಿಗೆ ಇದೇ ಪಾಠವನ್ನು ಮಾಡುವುದಿಲ್ಲ ? ಎಂದು ಪ್ರಶ್ನೆಯೊಂದಿಗೆ ಗಂಡು-ಹೆಣ್ಣಿನ ನಡುವಿನಲ್ಲಿನ ತಾರತಮ್ಯವನ್ನು ತಿಳಿಸಲು ಹೊರಡುವ ಲೇಖಕಿ, ಓದುಗರ ಮನಸ್ಸಿನಲ್ಲೂ ಪ್ರಶ್ನೆಯನ್ನು ಹುಟ್ಟಿಸುತ್ತಾರೆ. ಸ್ತ್ರೀವಾದದ ಬಗ್ಗೆ ತನ್ನದೇ ವ್ಯಾಖ್ಯಾನವನ್ನು ನೀಡಿ, ಕೆಲವು ವಿಷಯಗಳನ್ನು ಚರ್ಚಿಸುತ್ತಾ ವಿಮರ್ಶಿಸುತ್ತಾ, ಹೆಣ್ತನದ ಮಹತ್ವಕ್ಕೆ ಸಮಂಜಾಯಿಶಿ ಕೊಡುವಲ್ಲಿ ಯಶಸ್ವಿಯಾಗಿದ್ದಾಲೆ
ನಂತರ ಶುರುವಾಗುವ ಚಿಮಮಾಂಡಳ 15 ಸಲಹೆಗಳು, ಹೆಣ್ಣು ಮಕ್ಕಳ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಈಗಾಗಲೇ ಇರುವ ಪೂರ್ವಗ್ರಹ ಆಚರಣೆಯನ್ನೇ ಕಲಿಸದೇ, ಹೊಸ ವಾತವರಣವನ್ನು ಸೃಷ್ಟಿಸಿ, ಅವಳನ್ನು ಸ್ವತಂತ್ರ್ಯಾಲೋಚನೆಯಲ್ಲಿ ಬೆಳೆಸಿ ಎಂದಿರುವ ಲೇಖಕಿಯ 15 ಸಲಹೆಗಳು ನಿಜಕ್ಕೂ ಶ್ಲಾಘನೀಯ.
ಹಿಂದಿನ ಕಾಲಘಟ್ಟಕ್ಕೆ ಹೋಲಿಸಿದರೆ, ಇಂದಿನ ಕಾಲಘಟ್ಟದ ಹೆಣ್ಣು ಸ್ವತಂತ್ರ್ಯಳಾಗಿದ್ದಾಳೆ, ಅಕ್ಷರಸ್ಥೆಯಾಗಿದ್ದಾಳೆ. ತನ್ನ ಇಚ್ಚೆಯಂತೆ ನಡೆಯುವ ಸ್ವತಂತ್ರ್ಯವನ್ನು ಹೊಂದಿದ್ದಾಳೆ . ಆದರೆ ಚಿಮಮಾಂಡಳ ಹೇಳುವಂತೆ ಸಮಾನತೆಯನ್ನು ಹೊಂದಿದ್ದರೂ ಅಸಮಾನತೆಯಲ್ಲೇ ಬದುಕುತ್ತಿದ್ದಾಳೆ. ಹೆಣ್ಣು-ಗಂಡು ಮಕ್ಕಳ ಆಟಿಕೆಯಲ್ಲೇ ನಾವು ವಿಭಾಗೀಯಗಳನ್ನು ಸೃಷ್ಠಿಸಿ, ಮಕ್ಕಳು ಬೆಳೆಯುವಾಗಲೇ, ತಾರತಮ್ಯದ ಸಸಿಯನ್ನು ನಡುತ್ತಿದ್ದೇವೆ ಎಂಬುದು ನಮಗರಿವಿಲ್ಲದ ನೈಜ ಸತ್ಯ, ಇದನ್ನು ಚಿಮಮಾಂಡಳು ಗುರುತಿಸಿರುವ ರೀತಿ ನನ್ನನ್ನು, ಒಂದು ಕ್ಷಣ ದಿಗ್ಭ್ರಾಂತಳನ್ನಾಗಿ ಮಾಡಿದಂತು ನಿಜ,
ಹೌದಲ್ಲವೇ, ನಾವು ಹೆಣ್ಣು ಮಕ್ಕಳನ್ನು ಪೋಷಕರಾಗಿ, ನಾವು ಸ್ವತಃ ಹೆಣ್ಣಾಗಿ, ನಮ್ಮ ಆಟಿಕೆಯ ಆಯ್ಕೆ ಗೊಂಬೆ , ಅಡಿಗೆ ಆಟಿಕೆಗಳು, ಅಲಂಕಾರಿಕ ಸಾಮಾನುಗಳು, ಈ ಆಟಿಕೆಗಳೇ ಯಾಕೆ ಎಂಬ ಪ್ರಶ್ನೆ ನಮ್ಮಲೇಂದು ಮೂಡಲೇ ಇಲ್ಲ. ಪೂರ್ವ ನಿಯೋಜಿತ ಕಟ್ಟುಪಾಡಿನ ಹಾಗೇ, ಪೂರ್ವನಿಯೋಜಿತ ಆಟಿಕೆಗಳಾಗಿವೆ. ಇಲ್ಲೇ ನಾವು ತಾರತಮ್ಯದ ಬೀಜವನ್ನು ಬಿತ್ತುತ್ತಿದ್ದೇವೆ ನಮಗರಿವಿಲ್ಲದೇ. ಹೆಣ್ಣು ಮಕ್ಕಳು ವಯಸ್ಸಿಗೆ ಬಂದ ನಂತರ ಮದುವೆ ಮಾಡಬೇಕೆಂಬ ಮಾತಿಗಿಂತ ದುಡಿಯುವ ವಯಸ್ಸಾಗಿದೆ ಎಂದು ಯಾಕೆ ಹೇಳುವುದಿಲ್ಲ ನಾವು. ಹೀಗೆ ನೂರಾರು ಪ್ರಶ್ನೆ ನಮ್ಮಲ್ಲೇ ಉದ್ಭವಿಸುತ್ತದೆ.
ಒಟ್ಟಾರೆ ಹೇಳುವುದಾದರೆ, ಡಾ.ಕಾವ್ಯಶ್ರೀ ಅವರು, “ಫೆಮಿನಿಸ್ಟ್ ಮ್ಯಾನಿಫೆಸ್ಟೊ”, “ಮಗಳನ್ನು ಬೆಳೆಸಲು ಚಿಮಮಾಂಡಳ 15 ಸಲಹೆಗಳು” ಎಂಬ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿರುವುದು ಸ್ವಾಗತರ್ಹ.
- ಮಾಲಾ ಹಾಸನ