ಬೆಂಗಳೂರು: ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯೆ ಪ್ರವೇಶಿಸಿ ಕಡಿಮೆ ಬೆಲೆಗೆ ಮನೆ ಬರೆದುಕೊಡುವಂತೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು, ಈ ಸಂಬಂಧ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಚಿನ್ನೇಗೌಡ ನೀಡಿದ ದೂರು ಆಧರಿಸಿ ಇನ್ಸ್ಪೆಕ್ಟರ್ ಎ ವಿ ಕುಮಾರ್, ಕಾನ್ಸ್ಟೇಬಲ್ಗಳಾದ ಉಮೇಶ್, ಅನಂತ್, ಕೃತ್ಯದಲ್ಲಿ ಭಾಗಿಯಾಗಿದ್ದ ಸಿ ಪಿ ಗವೀಗೌಡ, ದಿವ್ಯ, ಸೋಮಶೇಖರ್ ಆರಾಧ್ಯ ಹಾಗೂ ದಿನೇಶ್ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ? : ಸಿವಿಲ್ ಗುತ್ತಿಗೆದಾರ ಚನ್ನೇಗೌಡ ಎಂಬುವವರ ಪತ್ನಿ ಅನುಷಾ ಅವರು ಸರ್ಕಾರಿ ಉದ್ಯೋಗದಲ್ಲಿದ್ದು, ಈ ಹಿಂದೆ ಅನುಷಾ ಅವರ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸುವುದಾಗಿ ಮತ್ತು ಅದಕ್ಕೆ ಪ್ರತಿಯಾಗಿ 4 ಕೋಟಿ ಮೌಲ್ಯದ ಮನೆ ಬರೆದುಕೊಡುವಂತೆ ಇನ್ಸ್ಪೆಕ್ಟರ್ ಕುಮಾರ್ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
