ಬೆಂಗಳೂರು : ಗ್ರಾಮೀಣ ಭಾರತದಲ್ಲಿ ಒಬ್ಬರಿಗೊಬ್ಬರು ಕಷ್ಟ ಸುಖಗಳನ್ನು ಹಂಚಿಕೊಂಡು, ಹೊಂದಿಕೊಂಡು ಹೋಗುವ ಗುಣ ಈ ಆಧುನಿಕ ಕಾಲದಲ್ಲಿಯೂ ಉಳಿದುಕೊಂಡಿದೆ ಎಂದು ಸಂಸ್ಕೃತಿ ಚಿಂತಕ, ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ಅಭಿಪ್ರಾಯಪಟ್ಟರು.
ಅವರು ನಗರದ ಕನ್ನಡ ಯುವ ಜನ ಸಂಘದವರು ಆಯೋಜಿಸಿದ್ದ ವಾರದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ* ಜಾನಪದ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು* ಎಂಬ ವಿಷಯ ಕುರಿತು ಮಾತನಾಡಿದರು. ಇಂದು ನಗರ, ಗ್ರಾಮಾಂತರ ಎಂಬ ಭೇದ ಭಾವ ಇಲ್ಲ. ಪಾಶ್ಚಿಮಾತ್ಯ ಮತ್ತು ಆಧುನಿಕ ಜಗತ್ತು ಸಾಕಷ್ಟು ಬದಲಾವಣೆ ಕಾಣುತ್ತಿವೆ. ತಾಂತ್ರಿಕತೆ, ವೈಜ್ಞಾನಿಕ, ಶೈಕ್ಷಣಿಕ ವಲಯಗಳಲ್ಲಿ ಹೆಚ್ಚು ಹೆಚ್ಚು ಬೆಳೆದಂತೆಲ್ಲಾ ಮನುಷ್ಯನ ಜೀವನ ನಿರ್ವಹಣೆ ಬದಲಾದ ಸಂದಿಗ್ದತೆಯು , ಕೊಳ್ಳು ಬಾಕುತನ , ಸ್ವಾರ್ಥತನದಿಂದ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ವ್ಯಾಪಾರವಾಗಿವೆ.

ಹಿರಿಯರನ್ನು, ವಿದ್ಯೆ, ಬುದ್ಧಿ, ಅನ್ನ ಕೊಟ್ಟ ಮನೆಯನ್ನು ಮರೆಯುವಂತೆ ಕೆಲವು ಸನ್ನಿವೇಶಗಳನ್ನು ನಾವೇ ನಿರ್ಮಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ಅನಕ್ಷರಸ್ಥ ಗ್ರಾಮೀಣ ಭಾರತದಲ್ಲಿ ವಿದ್ಯಾವಂತರೆನಿಸಿಕೊಂಡವರು ತಿಂಗಳಿಗೆ ಹೊತ್ತು ಗೊತ್ತಿಲ್ಲದೆ ಲಕ್ಷಾಂತರ ರೂಪಾಯಿ ದುಡಿದು ಕಾಲಕಾಲಕ್ಕೆ ತಿಂದು ಉಂಡು ಇದ್ದಷ್ಟು ದಿನ ಕಂತೆ ಎಸೆಯೋಣ ಅನ್ನುವ ಮಟ್ಟಿಗೆ ಈಗಿನ ಜನರ ಭಾವನೆಯಾಗಿದೆ ಎಂದರು. ಓದದೇ ಇದ್ದವರು, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಗಾದೆ ಇಂದಲ್ಲ ನಾಳೆ ಜನರು ತಿಳಿದು ಹಳ್ಳಿಗಳೇ ಶ್ರೇಷ್ಠ, ಗ್ರಾಮೀಣ ಜನರ ಜೀವನ ಸುಖ ದುಃಖಗಳನ್ನು ಅರ್ಥ ಮಾಡಿಕೊಂಡು ಒಬ್ಬರಿಗೊಬ್ಬರು ಬಾಳುವೆ ನಡೆಸುವ ದಿನಗಳು ಬಂದೇ ಬರುತ್ತದೆ ಎಂದ ಅವರು, ಕನ್ನಡದ ಅನೇಕ ಜಾನಪದ ಗೀತೆಗಳನ್ನು ತಮ್ಮ ಕಂಠಸಿರಿಯಲ್ಲಿ ಹಾಡಿ ಜಾನಪದ ತ್ರಿಪದಿಗಳ ಮಹತ್ವವನ್ನು ತಿಳಿಸಿಕೊಟ್ಟರು.

ಇಂದಿನ ತಲೆಮಾರಿನ ಯುವಕ,ಯುವತಿಯರಿಗೆ ಹಳ್ಳಿಯ ಜನರು ಬಿಸಿಲು, ಮಳೆ,ಚಳಿ,ಗಾಳಿ ಎನ್ನದೆ ತಮ್ಮ ಮಕ್ಕಳನ್ನು ಕಷ್ಟ ಪಟ್ಟು ಸಾಕುವ, ವಿದ್ಯಾವಂತರಾಗಿ ಮಾಡುವ ಆಸೆ, ಆಕಾಂಕ್ಷೆ ಹೊತ್ತು ಸಾಕಿ ಸಲುಹುತ್ತಾರೆ. ಆದರೆ ವಯಸ್ಸಾದ ಕಾಲದಲ್ಲಿ ಅಪ್ಪ ಅಮ್ಮರನ್ನು. ನೋಡಿಕೊಳ್ಳದ ಸ್ಥಿತಿಗೆ ಸಮಾಜ ಬಂದಿದೆ ಎಂದರೆ ನಾವು ಇಂದು ಮೌಲ್ಯಾಧಾರಿತ ಶಿಕ್ಷಣ ಕೊಡಬೇಕು..ಸಮಾಜದಲ್ಲಿ ಸುಸಂಸ್ಕೃತನಾಗಿ ಬಾಳುವಿಕೆಯನ್ನು ಕಲಿಸಬೇಕು, ಮಾರ್ಕ್ಸ್ ವಾದಿಗಳನ್ನಾ ಗಿ , ಹಣಗಳಿಕೆಯೇ ಮುಖ್ಯ ಮಾನದಂಡವಾಗಿಸದೆ ಸುತ್ತ ಮುತ್ತಲಿನ ನಾಲ್ಕು ಜನರೊಂದಿಗೆ ಸಂತೋಷದಿಂದ ಬದುಕುವುದನ್ನು ಕಲಿಸೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯುವಜನ ಸಂಘದ ಅಧ್ಯಕ್ಷ ಜಗದೀಶ್ ರೆಡ್ಡಿ ಅವರು ಇಂದು ನಾವು ಸಂಸ್ಕೃತಿ, ಸಂಸ್ಕಾರ ಅನ್ನುವುದು ಉಡುವುದು ಉಣ್ಣುವುದಕ್ಕೂ ಲೆಕ್ಕ ಹಾಕುವ ಪರಿಸ್ಥಿತಿ ಬಂದಿದೆ. ಮನುಷ್ಯರಾದ ನಾವು ಕಾಡು ಪ್ರಾಣಿಗಳು, ಪ್ರಕೃತಿಯ ಪಕ್ಷಿಗಳಲ್ಲಿ ಕಂಡುಬರುವ ಗುಣವನ್ನು ಬೆಳೆಸಿಕೊಳ್ಳಬೇಕು, ನಗರ ಜೀವನ ಇಂದು ಒತ್ತಡದಲ್ಲಿ ಸಿಲುಕಿದೆ.ಇದರಿಂದ ಪಾರಾಗುವ ಬಗೆಯನ್ನು ಸಂಘಸಂಸ್ಥೆಗಳ ಇಂತಹ ಉಪನ್ಯಾಸಕ, ಸಾಹಿತ್ಯ, ಸಂಗೀತ, ನಾಟಕ ಕಲೆಗಳ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷದಿಂದ ಬಾಳೋಣ ಎಂದರು.
ವೇದಿಕೆಯಲ್ಲಿ ಕುವೆಂಪು ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಮ್ ಸಿ ನರೇಂದ್ರ, ಕನ್ನಡ ಯುವಜನ ಸಂಘದ ಅಧ್ಯಕ್ಷ ಜಗದೀಶ್ ರೆಡ್ಡಿ, ಕನ್ನಡ ಯುವ ಜನ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ದೇಗಾವಿ ಉಪಸ್ಥಿತರಿದ್ದರು.
