ತುಮಕೂರು- ಕಾಯಕ ಯೋಗಿ, ಕರ್ನಾಟಕ ರತ್ನ, ತ್ರಿವಿಧ ದಾಸೋಹ ಮೂರ್ತಿ, ಆಧುನಿಕ ಬಸವಣ್ಣ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ಮಂದಿರಕ್ಕೆ ತೆರಳಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿಯವರನ್ನು ಭೇಟಿ ಮಾಡಿ ಫಲತಾಂಬೂಲ ನೀಡಿ ಆಶೀರ್ವಾದ ಪಡೆದರು.
ಶ್ರೀಗಳೊಂದಿಗೆ ಸ್ವಲ್ಪ ಹೊತ್ತು ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪನವರು, ಶ್ರೀಗಳ 119ನೇ ಜನ್ಮ ಜಯಂತ್ಯೋತ್ಸವದ ಶುಭ ಸಂದರ್ಭದಲ್ಲಿ ಗದ್ದುಗೆ ದರ್ಶನ ಪಡೆಯುವಂತಹ ಸೌಭಾಗ್ಯ ನನಗೆ ಸಿಕ್ಕಿದೆ ಎಂದರು.
ಪ್ರತಿನಿತ್ಯವೂ ನಾನು ಶ್ರೀಗಳನ್ನು ನೆನಪು ಮಾಡಿಕೊಳ್ಳದೆ, ಅವರು ಹೆಸರನ್ನು ಜಪಿಸದೆ ಯಾವ ಕೆಲಸವನ್ನೂ ಮಾಡುವುದಿಲ್ಲ. ಪೂಜ್ಯರ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ ಎಂದು ಅವರು ಹೇಳಿದರು.
ನಾಳೆ ಶ್ರೀಗಳ 119ನೇ ಜಯಂತಿ ಮತ್ತು ಗುರುವಂದನಾ ಮಹೋತ್ಸವ ನಡೆಯುತ್ತಿದ್ದು, ಈ ಅಭೂತ ಪೂರ್ವ ಕಾರ್ಯಕ್ರಮದಲ್ಲಿ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸುತ್ತಿರುವುದು ಸ್ವಾಗತಾರ್ಹ. ರಾಷ್ಟçಪತಿಗಳು ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿರುವುದು ತುಮಕೂರಿನ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಠದ ಸಿಇಓ ಜಯವಿಭವಸ್ವಾಮಿ,ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರುದ್ರೇಶ್, ಮೈದಾಳ ಮಂಜುನಾಥ್, ಮರಿಸ್ವಾಮಿ, ವಿರೂಪಾಕ್ಷಪ್ಪ, ಚೇತನ್, ಗಣೇಶ್, ರಾಜಶೇಖರ್, ಮಾಜಿ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ.
