ರಾಮನಾಥಪುರ, ಏ.4: ಸಮಾಜದ ಅಭಿವೃದ್ಧಿಯ ಜೊತೆಗೆ ಇಂತಹ ಇಷ್ಟಲಿಂಗ ಪೂಜೆ ಮತ್ತು ಲಿಂಗಧಾರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿ, ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುವ ಕಾರ್ಯ ನಡೆಯಬೇಕು ಎಂದು ಶ್ರೀಕ್ಷೇತ್ರ ತಪೋವನ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಮಹಾಸ್ವಾಮೀಜಿ ಹೇಳಿದರು.

ಅವರು ಹಾಸನ ಜಿಲ್ಲೆಯ ಶ್ರೀಕ್ಷೇತ್ರ ತಪೋವನ ಮನೆಹಳ್ಳಿ ಮಠದಲ್ಲಿ ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ವತಿಯಿಂದ ನಡೆದ ಧಾರ್ಮಿಕ ಸಭೆ ಹಾಗೂ ಉಚಿತ ಇಷ್ಟಲಿಂಗ ಪೂಜೆ ಮತ್ತು ಲಿಂಗಧಾರಣೆ ಕಾರ್ಯಕ್ರಮದ ನಂತರ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಕಳೆದ 15 ವರ್ಷಗಳಿಂದ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಉಚಿತ ಇಷ್ಟಲಿಂಗ ಪೂಜೆ ಮತ್ತು ಲಿಂಗಧಾರಣೆ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಇದುವರೆಗೆ 26,630ಕ್ಕೂ ಹೆಚ್ಚು ವಟುಗಳಿಗೆ ಉಚಿತ ಲಿಂಗಧಾರಣೆ ಮಾಡಲಾಗಿದೆ ಎಂದು ತಿಳಿಸಿದರು.

ವಿಶ್ವ ವೀರಶೈವ ಮಹಾ ವೇದಿಕೆ ಸಂಸ್ಥಾಪಕ ನಟರಾಜು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯವು ಸಮಾಜದಲ್ಲಿ ಜನಜಾಗೃತಿ, ಸಂಘಟನೆ ಹಾಗೂ ಧಾರ್ಮಿಕ ಚೇತನ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮಠ, ಬೆಟ್ಟದಪುರ ಮಠ, ಚುಲುಮೆ ಮಠ, ಅರೆಮೇರಿ ಮಠ, ಬಸವಪಟ್ಟಣ ಮಠ, ಸೋಮವಾರಪೇಟೆ ಮಠದ ಶ್ರೀಗಳು ಭಾಗವಹಿಸಿದ್ದರು.

ಜೊತೆಗೆ ಅರಕಲಗೂಡು ತಾಲ್ಲೂಕು ಮಹಾಸಭಾ ಅಧ್ಯಕ್ಷ ಬೆಮ್ಮತ್ತಿ ಸುರೇಶ್, ಹಾಸನ ಜಿಲ್ಲಾ ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ ಅಧ್ಯಕ್ಷ ಹಳ್ಳಿಮೈಸೂರು ಪ್ರಕಾಶ್, ಅರಕಲಗೂಡು ತಾಲ್ಲೂಕು ಅಧ್ಯಕ್ಷ ಕೊಣನೂರು ಅಮೃತೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
