ಹಾಸನ, ಆಗಸ್ಟ್ 5: ಹಾಸನ ನಗರದ ಬಿ.ಕಾಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಇಂದು “ಹುತಾತ್ಮ ರೈತರ ಸ್ಮರಣಾರ್ಥ”ವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರವನ್ನು ಭವ್ಯವಾಗಿ ಆಯೋಜಿಸಲಾಗಿತ್ತು.
ಈ ಶಿಬಿರವನ್ನು ಶ್ರೀ ಶ್ರೀ ಶ್ರೀ ಜೋಡಿ ಆಂಜನೇಯ ಸ್ವಾಮಿ ಸೇವಾ ಸಮಿತಿ (ಬಿ.ಕಾಟಿಹಳ್ಳಿ), ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಹಾಸನಾಂಬ ಲಯನ್ಸ್ ಕ್ಲಬ್ (ಹಾಸನ), ಪುನರ್ಜೀವ ಸ್ವಯಂ ಸೇವಾ ಸಂಸ್ಥೆ, ಸ್ವಯಂ ಪ್ರೇರಿತ ರಕ್ತಕೇಂದ್ರ (ಚನ್ನರಾಯಪಟ್ಟಣ), ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (ಹಾಸನ) ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ನಾರಾಯಣ ಆಸ್ಪತ್ರೆ ಮೈಸೂರು ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರಾಸ್ತಾವಿಕ ನುಡಿಗಳನ್ನು ರೋಟರಿ ಕ್ಲಬ್ನ ಅಧ್ಯಕ್ಷ ಎಚ್.ಡಿ. ವಜ್ರಕುಮಾರ್ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕೆ. ಮೋಹನ್ ಕುಮಾರ್ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಪ್ರೌಢ ಶಿಕ್ಷಣ ಉಪನಿರ್ದೇಶಕ ಶ್ರೀ ಚಂದ್ರಶೇಖರ್ ಉದ್ಘಾಟಿಸಿ ಭಾಷಣ ಮಾಡಿದರು. ಹಾಸನ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಂಗನಾಥ್ ಅವರು ಸಹ ಉದ್ಘಾಟನೆಗೆ ಸಹಭಾಗಿಯಾಗಿ, ಕಾರ್ಯಕ್ರಮಕ್ಕೆ ಶೋಭೆ ತಂದರು.
ರೋಟರಿ ಜಿಲ್ಲೆ 3182ರ ವಲಯ 9ರ ಅಸಿಸ್ಟೆಂಟ್ ಗವರ್ನರ್ ರೋ. ಜೆ.ಎನ್. ಮಂಜುನಾಥ್ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಲಲಿತ್ ಕುಮಾರ್, ಭರತ್ ಕುಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದು, ಶುಭಾಶಯಗಳನ್ನು ಹಂಚಿಕೊಂಡರು. ರೈತಗೀತೆ ಪಠಣದ ಬಳಿಕ ಆರು ಮಂದಿ ರೈತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮವೂ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾಕ್ಷಾಯಿಣಿ ಮೇಡಂ ವಹಿಸಿ, ಅಧ್ಯಕ್ಷೀಯ ಭಾಷಣ ನೀಡಿದರು. ಕೊನೆಗೆ, ವಂದನಾರ್ಪಣೆಯನ್ನು ರೋಟರಿ ಕ್ಲಬ್ ಕಾರ್ಯದರ್ಶಿ ಕೆ.ಎಸ್. ಯೋಗೇಶ್ ನೆರವೇರಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶಾಲಾ ಶಿಕ್ಷಕಿ ನಾಗವೇಣಿ ಮೇಡಂ ಬಹುಮಟ್ಟದಲ್ಲಿ ನಡೆಸಿಕೊಟ್ಟರು.

ಶಿಬಿರದ ಅಂಗವಾಗಿ ಸುಮಾರು 20ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು. 300ಕ್ಕೂ ಹೆಚ್ಚು ಜನರು, ಶಾಲಾ ಮಕ್ಕಳ ಸಹಿತವಾಗಿ ಆರೋಗ್ಯ ತಪಾಸಣೆಗೆ ಭಾಗಿಯಾಗಿ, ಶಿಬಿರದಿಂದ ಲಾಭ ಪಡೆದರು.
