ಜೆನೀವಾ: ‘ಲಾ-ನಿನಾ’ ಹವಾಮಾನ ಪ್ರಕ್ರಿಯೆ ಈ ವರ್ಷದ ಸೆಪ್ಟೆಂಬರ್ನಿಂದ ಮರುಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ತಿಳಿಸಿದೆ. ಇದರಿಂದ ಮುಂಬರುವ ತಿಂಗಳುಗಳಲ್ಲಿ ಹವಾಮಾನದಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಬಹುದೆಂದು ಎಚ್ಚರಿಸಲಾಗಿದೆ.
‘ಎಲ್-ನಿನೊ’ ಮತ್ತು ‘ಲಾ-ನಿನಾ’ ಪೆಸಿಫಿಕ್ ಸಾಗರದ ಹವಾಮಾನ ಚಕ್ರದ ಎರಡು ಹಂತಗಳಾಗಿವೆ. ಎಲ್-ನಿನೊ ಪೆರುವಿನ ಸಮುದ್ರದ ನೀರನ್ನು ಬಿಸಿ ಮಾಡಿ ಭಾರತದ ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುವುದರ ಜೊತೆಗೆ ಚಳಿಗಾಲದಲ್ಲಿ ತಾಪಮಾನ ಹೆಚ್ಚಾಗುವಂತೆ ಮಾಡುತ್ತದೆ. ಇದಕ್ಕೆ ವಿರುದ್ಧವಾಗಿ ಲಾ-ನಿನಾ ಸಮುದ್ರದ ನೀರನ್ನು ತಂಪಾಗಿಸಿ ಮಳೆಗಾಲವನ್ನು ತೀವ್ರಗೊಳಿಸುವುದರ ಜೊತೆಗೆ ಚಳಿಗಾಲವನ್ನು ತೀವ್ರ ಶೀತಮಯವಾಗಿಸುತ್ತದೆ.
ಮನುಷ್ಯರ ಹಸ್ತಕ್ಷೇಪದಿಂದ ಈ ಚಕ್ರಗಳಲ್ಲಿ ಬದಲಾವಣೆಗಳು ಉಂಟಾಗುತ್ತಿದ್ದು, ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಮಳೆಪಾತ ಮತ್ತು ತಾಪಮಾನದ ಸ್ವರೂಪದಲ್ಲಿ ಅಸಮಾನತೆ ಕಂಡುಬರುತ್ತಿದೆ ಎಂದು ಡಬ್ಲ್ಯೂಎಂಒ ವರದಿ ತಿಳಿಸಿದೆ.
