
ಚಾಮರಾಜನಗರ,ಫೆ.5:-ನಗರದ ನಗರಸಭೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ 5ನೇ ಹಣಕಾಸು ಆಯೋಗದ ಸಭೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ವಾಸಿಸುವ ಜನರ ಬಹುದೊಡ್ಡ ನಿರೀಕ್ಷೆಯಾಗಿರುವ ಶಾಶ್ವತ ಕುಡಿಯುವ ನೀರು ಯೋಜನೆಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಗರಸಭಾ ಸದಸ್ಯರು ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಐದನೇ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ.ಸಿ ನಾರಾಯಣ ಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಆಗಬೇಕಿರುವ ಸಮಗ್ರ ಅಭಿವೃದ್ಧಿಯ ಸಂಬಂಧ ಅನುದಾನ ಹಂಚಿಕೆಯಲ್ಲಿ ಬಂಡವಾಳ ಸೃಜನೆ ಘಟಕದ ವೆಚ್ಚವನ್ನು ವಾರ್ಷಿಕವಾಗಿ ಹೆಚ್ಚಳ ಮಾಡಬೇಕು ಎಂದು ಒಕ್ಕೊರಲಿನಿಂದ ಸದಸ್ಯರನ್ನು ಕೇಳಿಕೊಂಡರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಅಬ್ರಾರ್ ಅಹಮ್ಮದ್ ಮಾತನಾಡಿ, ಈಗಾಗಲೇ ಶಾಶ್ವತ ಕುಡಿಯುವ ನೀರಿನ ಯೋಜನೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಯೋಜನೆ ಜಾರಿಗೆ ವಿಶೇಷ ಅನುದಾನವನ್ನು ನೀಡಬೇಕು. ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ನಗರದ ಎಲ್ಲಾ ರಸ್ತೆಗಳು ಕಗ್ಗತ್ತಲಿನಿಂದ ಕೂಡಿದ್ದು, ಸಮರ್ಪಕ ವೈಜ್ಞಾನಿಕ ರೀತಿಯಲ್ಲಿ ಬೀದಿದೀಪ ಅಳವಡಿಕೆ ಹಾಗೂ ಪೌರಕಾರ್ಮಿಕರಿಗೆ ಸೂಕ್ತ ಸಮಯಕ್ಕೆ ವೇತನ ಮಂಜೂರು ಮಾಡುವಂತೆ ಸ್ಥಳೀಯ ಸಂಸ್ಥೆಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಬೇಕು. ನಗರಸಭೆ ಕಚೇರಿಯಲ್ಲಿ ಸರ್ವರ್ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಲು ಅತ್ಯಾಧುನಿಕ ವ್ಯವಸ್ಥೆ ಅಳವಡಿಕೆಗೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದರು.
ಸದಸ್ಯ ಎಂ.ಮಹೇಶ್ ಮಾತನಾಡಿ, ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ ಹೊರಗುತ್ತಿಗೆ ಮತ್ತು ನೇರಪಾವತಿ ಪೌರಕಾರ್ಮಿಕರಿಗೆ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತಿದೆ. ಇದರಿಂದ ಸೂಕ್ತ ಸಮಯಕ್ಕೆ ಅವರಿಗೆ ವೇತನ ನೀಡಲು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಎಸ್.ಎಫ್.ಸಿ ಅನುದಾನದಲ್ಲಿ ಅವರಿಗೆ ವಾರ್ಷಿವಾಗಿ ಅನುದಾನ ನಿಗದಿ ಮಾಡಿದರೆ ಅನುಕೂಲವಾಗುತ್ತದೆ. ನಗರಸಭೆ ಮತ್ತು ಇನ್ನಿತರೆ ಸ್ಥಳೀಯ ಸಂಸ್ಥೆಗಳಿಗೆ 2011 ರ ಜನಗಣತಿ ಪ್ರಕಾರ ಅನುದಾನವನ್ನು ನೀಡಲಾಗುತ್ತಿದೆ. ಆದರೇ 2024 ಕ್ಕೆ ಹೋಲಿಕೆ ಮಾಡಿದರೇ ಅಜಗಜಾಂತರ ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನವನ್ನು ವಿಶೇಷವಾಗಿ ಗಡಿಜಿಲ್ಲೆಗೆ ಬಿಡುಗಡೆ ಮಾಡಿಸಿಕೊಡಬೇಕು ಎಂದು ಸಲಹೆ ನೀಡಿದರು.
ಸದಸ್ಯ ಬಸವಣ್ಣ ಮಾತನಾಡಿ, ನಗರಸಭೆಯ 31 ವಾರ್ಡ್ಗಳಲ್ಲಿ 24 ಕೊಳಚೆ ಪ್ರದೇಶಗಳನ್ನು ಗುರುತಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ 5 ಲಕ್ಷ ರೂ, ಕಾಮಗಾರಿಯನ್ನು 6 ತಿಂಗಳಾದರೂ ಮುಗಿಸುವುದಿಲ್ಲ. ಹಲವಾರು ಬಡಾವಣೆಗಳಲ್ಲಿ ಇ-ಸ್ವತ್ತುಗಳನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಸಂಬಳ ನೀಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಸದಸ್ಯ ಸುದರ್ಶನ್ ಗೌಡ ಮಾತನಾಡಿ, ಜಿಲ್ಲಾ ಕೇಂದ್ರವಾಗಿ 25 ವರ್ಷಗಳಾದರೂ, ಈ ವರೆಗೂ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ನಗರಸಭೆಗೆ ಬಹುಮುಖ್ಯವಾಗಿ ಖಾಯಂ ನೌಕರರು ನೇಮಕವಾದರೇ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ನಗರಸಭೆ ವ್ಯಾಪ್ತಿಯಲ್ಲಿ ಸೂಕ್ತ ರೀತಿಯಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ. ತೆರಿಗೆ ಸಂಗ್ರಹವಾಗದೇ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆಗಾಗಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಹೆಚ್ಚಿನ ಅನುದಾನವನ್ನು ದೊರಕಿಸಿಕೊಡುವಂತೆ ಮನವಿ ಮಾಡಿದರು.
ಸಭೆಯಲ್ಲಿ 5ನೇ ಹಣಕಾಸು ಆಯೋಗದ ಸದಸ್ಯ ಮೊಹಮ್ಮದ್ ಸನಾಹುಲ್ಲಾ, ಆರ್.ಎಸ್.ಪೋಂಡೆ, ಸಮಾಲೋಚಕ ಎಂ.ಕೆ.ಕೆಂಪೇಗೌಡ, ಸಿ.ಜೆ.ಸುಪ್ರಸನ್ನ, ಯಾಲಕ್ಕಿ ಗೌಡ, ನಗರಸಭಾ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯಂ, ಯೋಜನಾ ನಿರ್ದೇಶಕಿ ಸುಧಾ, ಪೌರಾಯುಕ್ತ ಎಸ್.ವಿ.ರಾಮದಾಸ್ ಹಾಗೂ ಸದಸ್ಯರು ಹಾಜರಿದ್ದರು.
ವರದಿ: ಶ್ರೀ ಸಾಯಿ ಎಸ್ ಮಂಜು