ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।
ಮತ್ ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ ॥೪॥
ಮತ್ ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ –ಈ ಎಲ್ಲ ಜಗತ್ತು ಮೈದೋರದ ನನ್ನಿಂದ ತುಂಬಿದೆ.ಇಲ್ಲಿ ಇರುವವೆಲ್ಲ ನನ್ನಲ್ಲಿ ನೆಲೆಸಿವೆ. ನಾನು ಅವುಗಳ ನೆರವಿನಲ್ಲಿಲ್ಲ.
ಕೃಷ್ಣ ಹೇಳುತ್ತಾನೆ “ನಾನು ಇಡೀ ಜಗತ್ತಿನಲ್ಲಿ ತುಂಬಿರುವ ಅವ್ಯಕ್ತಮೂರ್ತಿ” ಎಂದು. ಇಲ್ಲಿ ಬಳಸಿರುವ ಅವ್ಯಕ್ತಮೂರ್ತಿ ಎನ್ನುವ ಪದದಲ್ಲಿ ಅವ್ಯಕ್ತ ಮತ್ತು ಮೂರ್ತಿ ಎನ್ನುವುದು ಪರಸ್ಪರ ವಿರುದ್ಧ ಪದಗಳು. ಅವ್ಯಕ್ತ ಎಂದರೆ ಕಾಣದ್ದು, ಆಕಾರವಿಲ್ಲದ್ದು. ಮೂರ್ತಿ ಎಂದರೆ ಆಕೃತಿ ಮತ್ತು ರೂಪ. ಭಗವಂತ ಆಕಾಶದಂತೆ ಎಲ್ಲೆಡೆ ವ್ಯಾಪಿಸಿರುವ ಅವ್ಯಕ್ತ ಆದರೆ ಆತ ಜ್ಞಾನಾನಂದಮಯನಾಗಿ ಎಲ್ಲರೊಳಗೆ ತುಂಬಿರುವ ಮೂರ್ತಿ. ಒಂದೊಂದು ವಸ್ತುವಿನಲ್ಲೂ ಒಂದೊಂದು ರೂಪದಲ್ಲಿ ತುಂಬಿರುವ ಅನಂತ ರೂಪಗಳುಳ್ಳವ ಆ ಭಗವಂತ. ಕೃಷ್ಣ ಹೇಳುತ್ತಾನೆ “ಪ್ರತಿಯೊಂದು ವಸ್ತುವಿಗೂ ನಾನು ಆಧಾರ, ಈ ಇಡೀ ಪ್ರಪಂಚ ನನ್ನನ್ನು ಅವಲಂಬಿಸಿಕೊಂಡಿದೆ. ಆದರೆ ನಾನು ನಿರಾಲಂಬನಾಗಿ ಎಲ್ಲೆಡೆ ತುಂಬಿದ್ದೇನೆ”. ಎಂದು.
