ಬೆಂಗಳೂರು, ಫೆಬ್ರವರಿ 23: ಸಂಸ್ಕೃತಿ, ಸೃಜನಶೀಲತೆ ಮತ್ತು ವ್ಯಾಪ್ತಿಯನ್ನು ಆಧರಿಸಿದ ಭವಿಷ್ಯದ ಕಂಟೆಂಟ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ Zee Entertainment Enterprises ಸಂಸ್ಥೆಯು ‘ಜೀ ಕಿರುಚಿತ್ರ ಸ್ಪರ್ಧೆ’ (Zee Short Film Contest) ಆಯೋಜಿಸಿದೆ. ದೇಶದಾದ್ಯಂತ ಉದಯೋನ್ಮುಖ ಚಲನಚಿತ್ರ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಮತ್ತು ಗೌರವಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಭಾರತದ ವಿವಿಧ ಪ್ರಾದೇಶಿಕ ಸಿನೆಮಾ ಧ್ವನಿಗಳನ್ನು ಒಂದೇ ರಾಷ್ಟ್ರೀಯ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ಸ್ಪರ್ಧೆ, ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಬಹುಭಾಷಾ ಪ್ರತಿಭೆ ಅನ್ವೇಷಣೆಯ ಮಹತ್ವಾಕಾಂಕ್ಷಿ ಪ್ರಯತ್ನಗಳಲ್ಲಿ ಒಂದಾಗಿದೆ. ಹಿಂದಿ, ಮರಾಠಿ, ಬೆಂಗಾಲಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಏಳು ಪ್ರಮುಖ ಭಾಷೆಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸಿನೆಮಾ ಹಿನ್ನೆಲೆಯ ಕಥೆಗಾರರಿಗೆ ರಾಷ್ಟ್ರೀಯ ಮಟ್ಟದ ಅವಕಾಶ ದೊರೆಯಲಿದೆ.
ಈ ಸ್ಪರ್ಧೆಯ ಪ್ರಮುಖ ಆಕರ್ಷಣೆಯಾಗಿ ವಿವಿಧ ಪ್ರಾದೇಶಿಕ ಚಿತ್ರರಂಗಗಳಲ್ಲಿ ಹೊಸ ದಾರಿಯನ್ನು ತೋರಿದ ಖ್ಯಾತ ನಿರ್ದೇಶಕರು ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ‘ಗ್ಯಾಂಗ್ಸ್ ಆಫ್ ವಾಸೇಪುರ್’ ಮೂಲಕ ಖ್ಯಾತರಾದ ಅನುರಾಗ್ ಕಶ್ಯಪ್, ‘ನಟರಂಗ್’ ಖ್ಯಾತಿಯ ರವಿ ಜಾಧವ್, ‘ಆಟೋಗ್ರಾಫ್’ ನಿರ್ದೇಶಕ ಸೃಜಿತ್ ಮುಖರ್ಜಿ, ‘ಕಲ್ಕಿ 2898 AD’ ನಿರ್ದೇಶಕ ನಾಗ್ ಅಶ್ವಿನ್, ತಮಿಳಿನ ಸಮುತಿರಕಾನಿ, ಮಲಯಾಳಂನ ಲಿಜೋ ಜೋಸ್ ಪೆಲ್ಲಿಸ್ಸೇರಿ ಹಾಗೂ ಕನ್ನಡದ ಹೇಮಂತ್ ರಾವ್ ತೀರ್ಪುಗಾರರಾಗಿದ್ದಾರೆ.
ಮೊದಲ ಬಾರಿಗೆ ಇಂತಹ ದಿಗ್ಗಜ ನಿರ್ದೇಶಕರು ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಒಂದೇ ವೇದಿಕೆಯಡಿ ಒಂದಾಗಿರುವುದು ವಿಶೇಷವಾಗಿದೆ. ಈ ಸ್ಪರ್ಧೆಯು ಭವಿಷ್ಯದ ಪ್ರತಿಭೆಗಳನ್ನು ಬೆಳೆಸುವ ಸಂಸ್ಥೆಯ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ.
ಯುವ ಮತ್ತು ಉತ್ಸಾಹಿ ಚಿತ್ರ ನಿರ್ಮಾಪಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ಸ್ಪರ್ಧೆ ವೇದಿಕೆಯಾಗಿದ್ದು, ಭಾಗವಹಿಸುವವರಿಗೆ ವೃತ್ತಿಪರ ಚಲನಚಿತ್ರ ಕ್ಷೇತ್ರದಲ್ಲಿ ಮಾನ್ಯತೆ, ನಗದು ಬಹುಮಾನಗಳು ಮತ್ತು ‘ಜೀ’ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶಗಳು ದೊರೆಯಲಿವೆ.
ಈ ಕುರಿತು ಮಾತನಾಡಿದ ಜೀ ಮತ್ತು ZEE5 ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಕಾರ್ತಿಕ್ ಮಹದೇವ್, “ಭಾರತವು ವೈವಿಧ್ಯಮಯ ಕಥೆ ಹೇಳುವ ಸಂಸ್ಕೃತಿಗಳಿಗೆ ನೆಲೆಯಾಗಿದೆ. ಜೀ ಕಿರುಚಿತ್ರ ಸ್ಪರ್ಧೆಯ ಮೂಲಕ ಪ್ರತಿಭೆಗಳಿಗೆ ರಾಷ್ಟ್ರೀಯ ಮಟ್ಟದ ಅವಕಾಶಗಳನ್ನು ನೀಡುತ್ತಿದ್ದೇವೆ. ಇದು ಭಾರತೀಯ ಸಿನಿಮಾದ ಭವಿಷ್ಯ ರೂಪಿಸುವ ಮುಂದಿನ ತಲೆಮಾರಿನ ಕಥೆಗಾರರನ್ನು ಬೆಳೆಸುವ ಮಹತ್ವದ ಹೆಜ್ಜೆ” ಎಂದು ಹೇಳಿದರು.
ಇದೇ ವೇಳೆ ನಿರ್ದೇಶಕ ಅನುರಾಗ್ ಕಶ್ಯಪ್, “ಒಂದು ಕಿರುಚಿತ್ರವೇ ನನಗೆ ನನ್ನ ಮೊದಲ ದೊಡ್ಡ ಸಿನಿಮಾದ ಅವಕಾಶ ತಂದಿತು. ಚಲನಚಿತ್ರ ನಿರ್ಮಾಪಕರಾಗುವ ಕನಸನ್ನು ನನಸಾಗಿಸಲು ಇದು ಸುವರ್ಣಾವಕಾಶ” ಎಂದು ಅಭಿಪ್ರಾಯಪಟ್ಟರು. ಸೃಜಿತ್ ಮುಖರ್ಜಿ, ಲಿಜೋ ಜೋಸ್ ಪೆಲ್ಲಿಸ್ಸೇರಿ, ನಾಗ್ ಅಶ್ವಿನ್, ಹೇಮಂತ್ ರಾವ್, ರವಿ ಜಾಧವ್ ಹಾಗೂ ಸಮುತಿರಕಾನಿ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಲು ಯುವಕರಿಗೆ ಕರೆ ನೀಡಿದರು.
ಸಾಂಸ್ಕೃತಿಕವಾಗಿ ಪ್ರಭಾವಶಾಲಿ ಕಥೆ ಹೇಳುವಿಕೆಯನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ಮುಂದುವರಿಸುತ್ತಿರುವ ಜೀ ಸಂಸ್ಥೆ, ಈ ಸ್ಪರ್ಧೆಯ ಮೂಲಕ ಭಾರತೀಯ ಮನರಂಜನೆಯ ಭವಿಷ್ಯವನ್ನು ರೂಪಿಸುವ ಹೊಸ ಧ್ವನಿಗಳಿಗೆ ದಾರಿ ತೆರೆದಿದೆ. ಇದು ಮುಂದಿನ ಪೀಳಿಗೆಯ ಚಿತ್ರ ನಿರ್ಮಾಪಕರಿಗೆ ಬಲವಾದ ವೇದಿಕೆ ನಿರ್ಮಿಸುವ ಮಹತ್ವದ ಹೆಜ್ಜೆಯಾಗಿದೆ.
