ಹಾಸನ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (NFSA) ಡಿಸೆಂಬರ್–2025ರ ಮಾಹೆಗೆ ರಾಜ್ಯ ಸರ್ಕಾರವು ಬಿಪಿಎಲ್ (PHH) ಹಾಗೂ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಹೆಚ್ಚುವರಿ ಆಹಾರ ಧಾನ್ಯ ವಿತರಿಸುವ ಮೂಲಕ ಗುಡ್ ನ್ಯೂಸ್ ನೀಡಿದೆ.
ಡಿಸೆಂಬರ್–2025ರ ಮಾಹೆಗೆ ಪ್ರತಿ ಅಂತ್ಯೋದಯ (ಎಎವೈ) ಪಡಿತರ ಚೀಟಿಗೆ 21 ಕೆ.ಜಿ ರಾಗಿ ಮತ್ತು 14 ಕೆ.ಜಿ ಸಾರವರ್ಧಿತ (Fortified) ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಅಲ್ಲದೆ, ಪಿಹೆಚ್ಹೆಚ್ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 3 ಕೆ.ಜಿ ರಾಗಿ ಹಾಗೂ 2 ಕೆ.ಜಿ ಸಾರವರ್ಧಿತ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ.
ಇದರೊಂದಿಗೆ, ಏಕ ಸದಸ್ಯ, ದ್ವಿಸದಸ್ಯ ಮತ್ತು ತ್ರಿಸದಸ್ಯ ಎಎವೈ ಪಡಿತರ ಚೀಟಿಗಳನ್ನು ಹೊರತುಪಡಿಸಿ, ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರುಳ್ಳ ಎಎವೈ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ (ಕೇಂದ್ರ ಎನ್ಎಫ್ಎಸ್ಎ ಹಂಚಿಕೆಯ 35 ಕೆ.ಜಿಯನ್ನು ಹೊರತುಪಡಿಸಿ) ಹಾಗೂ ಪಿಹೆಚ್ಹೆಚ್ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ, ಡಿಸೆಂಬರ್–2025ರ ಮಾಹೆಗೆ ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆಯ ಬದಲಾಗಿ ಹೆಚ್ಚುವರಿ 5 ಕೆ.ಜಿ ಅನ್ನಭಾಗ್ಯ ಅಕ್ಕಿ ವಿತರಿಸಲಾಗುತ್ತದೆ.
ರಾಜ್ಯ ವ್ಯಾಪ್ತಿಯಲ್ಲಿ ಡಿಸೆಂಬರ್–2025ರ ಮಾಹೆಗೆ ಪ್ರತಿ ಪಿಹೆಚ್ಹೆಚ್ ಫಲಾನುಭವಿಗೆ ತಲಾ 5 ಕೆ.ಜಿ ಅಕ್ಕಿ ಹಂಚಿಕೆ ಪ್ರಮಾಣ ನಿಗದಿಪಡಿಸಿ ವಿತರಣೆ ಮಾಡಲಾಗಿದೆ. ಇದೇ ಅವಧಿಗೆ ಆದ್ಯತೇತರ (APL) ಪಡಿತರ ಚೀಟಿಗಳಿಗೆ ಯಾವುದೇ ಆಹಾರ ಧಾನ್ಯ ಹಂಚಿಕೆ ಇರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ.
ಇದಲ್ಲದೆ, ಹಾಸನ ಜಿಲ್ಲೆಯ ಆಲೂರು, ಬೇಲೂರು, ಅರಕಲಗೂಡು ಮತ್ತು ಸಕಲೇಶಪುರ ತಾಲ್ಲೂಕುಗಳ ಸೀಮೆಎಣ್ಣೆ ಪಡೆಯಲು ಒಪ್ಪಿಗೆ ನೀಡಿರುವ ಗ್ರಾಮಾಂತರ ಪ್ರದೇಶದ ಎಎವೈ ಹಾಗೂ ಪಿಹೆಚ್ಹೆಚ್ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡಿಗೆ 2 ಲೀಟರ್ಗಳಂತೆ, ಪ್ರತಿ ಲೀಟರ್ಗೆ ರೂ.35 ದರದಲ್ಲಿ ಸೀಮೆಎಣ್ಣೆ ಹಂಚಿಕೆ ಬಿಡುಗಡೆ ಮಾಡಲಾಗಿದೆ.
ಒಂದು ರಾಷ್ಟ್ರ – ಒಂದು ಪಡಿತರ ಚೀಟಿ ಯೋಜನೆ (ಅಂತರ್ ರಾಜ್ಯ/ಅಂತರ್ ಜಿಲ್ಲೆ ಪೋರ್ಟೆಬಿಲಿಟಿ) ಜಾರಿಯಲ್ಲಿರುವುದರಿಂದ, ಯಾವುದೇ ರಾಜ್ಯದ ಪಡಿತರ ಚೀಟಿದಾರರು ತಮ್ಮ ವರ್ಗಕ್ಕೆ ಅನುಗುಣವಾಗಿ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಯಾವುದೇ ನ್ಯಾಯಬೆಲೆ ಅಂಗಡಿದಾರರು ಕಡಿಮೆ ಪ್ರಮಾಣದ ಪಡಿತರ ವಿತರಿಸಿದ್ದರೆ, ಹಣ ಕೇಳಿದ್ದರೆ ಅಥವಾ ಇತರೆ ಅಕ್ರಮಗಳ ಬಗ್ಗೆ ದೂರು ನೀಡಲು ನಿಶುಲ್ಕ ದೂರವಾಣಿ ಸಂಖ್ಯೆ 1967, 1800-425-9339 ಹಾಗೂ 14445ಕ್ಕೆ ಸಂಪರ್ಕಿಸಬಹುದು. ಅಲ್ಲದೆ, ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿಗೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ.
ಈ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಮಾರಾಟ ಮಾಡುವುದು ಅಥವಾ ಸಂಗ್ರಹಣೆ ಮಾಡಿರುವುದು ಕಂಡುಬಂದಲ್ಲಿ, ಸಂಬಂಧಪಟ್ಟ ಪಡಿತರ ಚೀಟಿದಾರರಿಗೆ ಮುಕ್ತ ಮಾರುಕಟ್ಟೆ ದರದಂತೆ ದಂಡ ವಿಧಿಸಲಾಗುವುದು. ಜೊತೆಗೆ ಆ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಿಳಿಸಿದ್ದಾರೆ.

[…] […]