ಬೆಂಗಳೂರು, ಅಕ್ಟೋಬರ್ 31: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ನವೆಂಬರ್ 1ರಿಂದ ಹಳದಿ ಮಾರ್ಗ (ಯೆಲ್ಲೋ ಲೈನ್)ದಲ್ಲಿ ಐದನೇ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ. ನಾಳೆ ಬೆಳಿಗ್ಗೆ 5 ಗಂಟೆಗೆ ಈ ಹೊಸ ರೈಲು ವಾಣಿಜ್ಯ ಸೇವೆಗೆ ಒಳಗಾಗಲಿದ್ದು, ರಾಜ್ಯೋತ್ಸವದ 70ನೇ ವರ್ಷದ ಆಚರಣೆಗೆ ವಿಶೇಷ ಅರ್ಥ ನೀಡಲಿದೆ.
ಬಿಎಂಆರ್ಸಿಎಲ್ ಪ್ರಕಟಣೆಯ ಪ್ರಕಾರ, ಈ ಹೊಸ ರೈಲು ಸೇವೆ ಆರಂಭವಾದ ನಂತರ ಹಳದಿ ಮಾರ್ಗದಲ್ಲಿ ಪೀಕ್ ಅವಧಿಯಲ್ಲಿ ರೈಲುಗಳ ಆವರ್ತನವು ಪ್ರತಿ 15 ನಿಮಿಷಕ್ಕೊಮ್ಮೆ ನಡೆಯಲಿದೆ. ಪ್ರಸ್ತುತ 19 ನಿಮಿಷಗಳ ಅಂತರದಲ್ಲಿರುವ ರೈಲು ಸಂಚಾರ ಈಗ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಹೆಚ್ಚು ಸುಗಮ ಮತ್ತು ವೇಗವಾದ ಸಂಚಾರ ಸಿಗಲಿದೆ. ಈ ಬದಲಾವಣೆ ಎಲ್ಲಾ ದಿನಗಳಿಗೂ ಅನ್ವಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕೊನೆಯ ರೈಲು ರಾತ್ರಿ 11 ಗಂಟೆಗೆ ಸಂಚರಿಸಲಿದೆ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ ಸುಧಾರಿತ ಮೆಟ್ರೋ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಬಿಎಂಆರ್ಸಿಎಲ್ ವಿನಂತಿಸಿದೆ.
ಗಮನಾರ್ಹವಾಗಿ, ಈ ಹಳದಿ ಮಾರ್ಗಕ್ಕೆ ಆಗಸ್ಟ್ 10ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ನೀಡಿದ್ದರು. ಆರ್.ವಿ. ರಸ್ತೆ–ಬೊಮ್ಮಸಂದ್ರ ಮೆಟ್ರೋ ಮಾರ್ಗವು 19.5 ಕಿಮೀ ವಿಸ್ತೀರ್ಣ ಹೊಂದಿದ್ದು, ಒಟ್ಟು 16 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ.

