ಬೆಂಗಳೂರು: ರಾಜ್ಯ ಸರ್ಕಾರವು 2026ನೇ ಸಾಲಿನ ಬ್ಲಾಕ್ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ನಿಯಮಿತಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನದ ಸಂಸ್ಥೆಗಳ ನೌಕರರಿಗೆ ಸಿಹಿ ಸುದ್ದಿ ನೀಡಲಾಗಿದೆ.
ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ದಿನಾಂಕ 17-01-2025ರ ಸರ್ಕಾರಿ ಆದೇಶದನ್ವಯ 2025ನೇ ಸಾಲಿನ ಬ್ಲಾಕ್ ಅವಧಿಗೆ ನೀಡಲಾಗಿದ್ದ ಗಳಿಕೆ ರಜೆ ನಗದೀಕರಣ ಸೌಲಭ್ಯವು 31-12-2025ಕ್ಕೆ ಮುಕ್ತಾಯಗೊಳ್ಳಲಿದೆ. ಇದರ ಹಿನ್ನೆಲೆಯಲ್ಲಿ, ಸರ್ಕಾರವು 2026ನೇ ಸಾಲಿನ ಬ್ಲಾಕ್ ಅವಧಿಗೆ ಹೊಸದಾಗಿ ನಿಯಮಿತಗೊಳಿಸಿದ ಆದೇಶ ಜಾರಿಗೊಳಿಸಿದೆ.
ಸರ್ಕಾರಿ ಆದೇಶದಂತೆ, 2026ನೇ ಸಾಲಿನ ಬ್ಲಾಕ್ ಅವಧಿಯಲ್ಲಿ ರಾಜ್ಯ ಸರ್ಕಾರದ ಎಲ್ಲಾ ವೃಂದದ ಅಧಿಕಾರಿ ಮತ್ತು ನೌಕರರು, ಹಾಗೂ ಸರ್ಕಾರದಿಂದ ಸಹಾಯಾನುದಾನ ಅಥವಾ ಅನುದಾನ ಪಡೆಯುವ ಅಥವಾ ಪಡೆಯದಿರುವ ಕರ್ನಾಟಕ ಸರ್ಕಾರದ ಅಧೀನದ ಎಲ್ಲಾ ಸಂಸ್ಥೆಗಳು ಮತ್ತು ಉದ್ಯಮಗಳ ನೌಕರರು, ಸಂಬಂಧಿತ ಸಂಸ್ಥೆಗಳ ಆರ್ಥಿಕ ಸ್ಥಿತಿಗೆ ಒಳಪಟ್ಟು ಗರಿಷ್ಠ 15 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮಾನವಾದ ನಗದೀಕರಣ ಸೌಲಭ್ಯವನ್ನು ಪಡೆಯಬಹುದಾಗಿದೆ.
ಇದನ್ನು ಓದಿ: ನವದೆಹಲಿ: “ಕೃಷಿ-ಆಹಾರ ವ್ಯವಸ್ಥೆಗಳಲ್ಲಿ ಮಹಿಳೆಯರ ಕುರಿತು ಜಾಗತಿಕ ಸಮ್ಮೇಳನ”
ಈ ಸೌಲಭ್ಯವು ದಿನಾಂಕ 01-01-2026ರಿಂದ 31-12-2026ರ ವರೆಗೆ ಜಾರಿಯಲ್ಲಿರುತ್ತದೆ. ಅರ್ಹ ಸರ್ಕಾರಿ ಅಧಿಕಾರಿ ಅಥವಾ ನೌಕರರು ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಮನವಿ ಸಲ್ಲಿಸುವ ಮೂಲಕ ತಮ್ಮ ಇಚ್ಛೆಯ ಯಾವುದೇ ತಿಂಗಳಲ್ಲಿ 15 ದಿನಗಳ ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವುದೇ ಕಾರಣದಿಂದ ನಿಗದಿತ ಬ್ಲಾಕ್ ಅವಧಿಯೊಳಗೆ ಗಳಿಕೆ ರಜೆ ನಗದೀಕರಣಕ್ಕೆ ಮಂಜೂರಾತಿ ಆದೇಶ ಹೊರಡಿಸಲು ಸಾಧ್ಯವಾಗದಿದ್ದಲ್ಲಿ, ಸಂಬಂಧಿತ ಪ್ರಾಧಿಕಾರವು ಬ್ಲಾಕ್ ಅವಧಿ ಮುಕ್ತಾಯಗೊಂಡ ನಂತರವೂ ಆದೇಶ ಹೊರಡಿಸಬಹುದಾಗಿದೆ. ಆದರೆ, ನಗದೀಕರಣದ ಆರ್ಥಿಕ ಪ್ರಯೋಜನವನ್ನು ಸಂಬಂಧಿತ ಆರ್ಥಿಕ ವರ್ಷ ಅಂತ್ಯಗೊಳ್ಳುವ ಮೊದಲು ಪಡೆಯಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಗೆಜೆಟೆಡ್ ಅಧಿಕಾರಿಗಳ ವಿಷಯದಲ್ಲಿ, 2026ನೇ ಸಾಲಿನ ಗಳಿಕೆ ರಜೆ ನಗದೀಕರಣ ಮಂಜೂರಾತಿಗಾಗಿ ಹೆಚ್ಆರ್ಎಂಎಸ್ನಲ್ಲಿ ಲಭ್ಯವಿರುವ ಗಳಿಕೆ ರಜೆ ಲೆಕ್ಕಾಚಾರದ ಆಧಾರದಲ್ಲಿ ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮಹಾಲೇಖಪಾಲರು ಲೆಕ್ಕಾಚಾರದಲ್ಲಿ ವ್ಯತ್ಯಾಸ ಸೂಚಿಸಿದಲ್ಲಿ, ಅದನ್ನು ಸರಿಪಡಿಸಿ ಅದರನ್ವಯದ ಆರ್ಥಿಕ ಸೌಲಭ್ಯಕ್ಕೆ ಮಾತ್ರ ಅರ್ಹತೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 118ರಡಿ ನಿಗದಿಪಡಿಸಿರುವ ಗಳಿಕೆ ರಜೆ ನಗದೀಕರಣಕ್ಕೆ ಸಂಬಂಧಿಸಿದ ಇತರೆ ಎಲ್ಲಾ ಷರತ್ತುಗಳು ಯಥಾವತ್ತಾಗಿ ಅನ್ವಯವಾಗುತ್ತವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
