ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ವಿರುದ್ಧ ಈ ಹಿಂದೆ ಕೇಳಿ ಬಂದಿದ್ದ ಫೋನ್ ಟ್ಯಾಪಿಂಗ್ ಹಾಗೂ ಅಕ್ರಮವಾಗಿ ಮೊಬೈಲ್ ಕರೆ ವಿವರ(ಸಿಡಿಆರ್) ಪಡೆದ ಕೇಸ್ನಲ್ಲಿ ರಾಜ್ಯ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ ಎಂದು ತಿಳಿದು ಬಂದಿದೆ
ಆದ್ದರಿಂದ ಅಲೋಕ್ ಕುಮಾರ್ಗೆ ಡಿಜಿಪಿ ಆಗಿ ಸಿಗಬೇಕಿದ್ದ ಪದೋನ್ನತಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಫೋನ್ಟ್ಯಾಪಿಂಗ್, 50ಕ್ಕೂ ಹೆಚ್ಚು ಮಂದಿಯ ಸಿಡಿಆರ್ ಪಡೆದ ಆರೋಪದಡಿ ಇಲಾಖಾ ವಿಚಾರಣೆಗೆ ಆದೇಶ ನೀಡಲಾಗಿದ್ದು, ಈ ಕುರಿತು ಅಲೋಕ್ ಕುಮಾರ್ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ
ಡಿಜಿಪಿ ಪ್ರಮೋಷನ್ಗೆ ಕೊಕ್: 1994ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಅವರಿಗೆ ಇದೇ ತಿಂಗಳಲ್ಲಿ ಡಿಜಿಪಿ ಆಗಿ ಮುಂಬಡ್ತಿ ದೊರೆಯಬೇಕಿತ್ತು. ಆದರೆ, ಇಲಾಖಾ ವಿಚಾರಣೆಗೆ ಆದೇಶ ನೀಡಿರುವುದರಿಂದ ಮುಂಬಡ್ತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಅದೇ ಬ್ಯಾಚ್ನ ಹಿರಿಯ ಅಧಿಕಾರಿಯಾದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಡಿಜಿಪಿಯಾಗಿ ಮುಂಬಡ್ತಿ ದೊರೆಯಲಿದೆ ಎಂದು ಹೇಳಲಾಗಿದೆ
ಏನಿದು ಪ್ರಕರಣ?: 2019ರಲ್ಲಿ ಅಲೋಕ್ ಕುಮಾರ್ ಸಿಸಿಬಿ ಮುಖ್ಯಸ್ಥರಾಗಿದ್ದರು. ಈ ವೇಳೆ ಕೆಲ ಅಧಿಕಾರಿಗಳು, ಸ್ವಾಮೀಜಿಗಳು ಮತ್ತು ರಾಜಕೀಯ ಮುಖಂಡರ ಫೋನ್ ಟ್ಯಾಪಿಂಗ್ ಮತ್ತು ಸಿಡಿಆರ್ ಸಂಗ್ರಹಿಸಿದ್ದು, ಇದು ಪೊಲೀಸ್ ಇಲಾಖೆ ಹಾಗೂ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಮಧ್ಯೆಯೂ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದಕುಮಾರಸ್ವಾಮಿ ಅಲೋಕ್ ಕುಮಾರ್ಗೆ ಎಡಿಜಿಪಿಯಾಗಿ ಮುಂಬಡ್ತಿ ನೀಡಿ, ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದ್ದರು. ಆ ಬಳಿಕ ಕೇವಲ 48 ದಿನಗಳಿಗೆ ಕಮಿಷನರ್ ಹುದ್ದೆಯಿಂದ ಇಳಿಯಬೇಕಾಯಿತು. ಈ ವೇಳೆ ಭಾಸ್ಕರ್ರಾವ್ ನಗರ ಪೊಲೀಸ್ ಆಯುಕ್ತರಾಗಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ,. ಭಾಸ್ಕರ್ರಾವ್ ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಫೋನ್ ಟ್ಯಾಪಿಂಗ್ ಮಾಡಿ ಆಡಿಯೋ ವೈರಲ್ ಮಾಡಲಾಗಿತ್ತು. ಈ ಸಂಬಂಧ ಸಿಬಿಐನಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಸಿಬಿಐ ಅಧಿಕಾರಿಗಳು ಅಲೋಕ್ ಕುಮಾರ್ ಮನೆ ಮೇಲೆ ದಾಳಿ ಕೂಡ ಮಾಡಿದ್ದರು. ಆದ್ದರಿಂದ ಅಲೋಕ್ ಕುಮಾರ್ ಸಿಎಟಿ ಮೂಲಕ ತಡೆಯಾಜ್ಞೆ ತಂದಿದ್ದರು. ಬಳಿಕ ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಭಾಸ್ಕರ್ರಾವ್ ಪ್ರಶ್ನಿಸಿದ್ದರು
