ಬೆಂಗಳೂರು, ಮಾ.18: ಜನಗಣತಿ-2027 ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 50 ವರ್ಷ ಮೇಲ್ಪಟ್ಟ ಶಿಕ್ಷಕರ ಸೇವೆಯನ್ನು ಜಗಣತಿ ಕಾರ್ಯಕ್ಕೆ ಬಳಸಿಕೊಳ್ಳಲು ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆ ಪ್ರಕಾರ, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 50 ವರ್ಷ ದಾಟಿದ ಶಿಕ್ಷಕರನ್ನು ಜಗಣತಿ ಕರ್ತವ್ಯಕ್ಕೆ ನಿಯೋಜಿಸಲು ಸೂಚಿಸಲಾಗಿದೆ.
ಜಗಣತಿ-2027 ಯಶಸ್ವಿಗೆ ಸರ್ಕಾರದ ಸಿದ್ಧತೆ
ಸುತ್ತೋಲೆಯಲ್ಲಿ ತಿಳಿಸಿರುವಂತೆ, ಜಗಣತಿ-2027 ಕಾರ್ಯವನ್ನು ಸಮರ್ಪಕವಾಗಿ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಮಾನವ ಸಂಪನ್ಮೂಲ ಬಳಕೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರ ಈಗಾಗಲೇ Special Intensive Revision (SIR) ಪ್ರಕ್ರಿಯೆಯಲ್ಲಿ ಶಿಕ್ಷಕರನ್ನು Booth Level Officer (BLO) ಗಳಾಗಿ ಬಳಸಿಕೊಂಡ ಅನುಭವ ಹೊಂದಿದ್ದು, ಅದೇ ಮಾದರಿಯಲ್ಲಿ ಈಗ ಜಗಣತಿ ಕಾರ್ಯಕ್ಕೂ ಶಿಕ್ಷಕರನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ.
ಶಿಕ್ಷಣ ಕಾರ್ಯಕ್ಕೆ ತೊಂದರೆ ಆಗದಂತೆ ಸೂಚನೆ
ಜಗಣತಿ ಕಾರ್ಯ ಮತ್ತು SIR ಪ್ರಕ್ರಿಯೆ ಒಂದೇ ಅವಧಿಯಲ್ಲಿ ನಡೆದರೂ ಶಾಲಾ ಶಿಕ್ಷಣದ ದಿನನಿತ್ಯದ ಕಾರ್ಯಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಶಿಕ್ಷಣ ಇಲಾಖೆಯೊಳಗೇ ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಸರ್ಕಾರ ಸೂಚಿಸಿದೆ.
ವಿಶೇಷವಾಗಿ, ಶಾಲಾ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಜಿಲ್ಲಾಮಟ್ಟದಲ್ಲಿ ಸೂಕ್ತ ನಿರ್ವಹಣೆ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಯಾರಿಗೆ ರವಾನೆ?
ಈ ಸುತ್ತೋಲೆಯನ್ನು ರಾಜ್ಯದ ಕೆಳಕಂಡ ಅಧಿಕಾರಿಗಳಿಗೆ ರವಾನಿಸಲಾಗಿದೆ:
- ಎಲ್ಲಾ ಜಿಲ್ಲಾಧಿಕಾರಿಗಳು
- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
- ಜಿಲ್ಲಾ ಶಾಲಾ ಶಿಕ್ಷಣಾಧಿಕಾರಿಗಳು
ಸರ್ಕಾರದ ಉದ್ದೇಶ ಏನು?
ಜಗಣತಿ-2027 ರಾಜ್ಯ ಮಟ್ಟದ ಪ್ರಮುಖ ಕಾರ್ಯವಾಗಿರುವುದರಿಂದ, ನೆಲಮಟ್ಟದಲ್ಲಿ ಜನರ ಸಂಪರ್ಕ, ಮಾಹಿತಿ ಸಂಗ್ರಹಣೆ ಹಾಗೂ ಪರಿಶೀಲನೆಗಾಗಿ ಈಗಾಗಲೇ ಆಡಳಿತಾತ್ಮಕ ಅನುಭವ ಹೊಂದಿರುವ ಶಿಕ್ಷಕರನ್ನು ಬಳಸುವುದು ಸೂಕ್ತ ಎಂದು ಸರ್ಕಾರ ನಿರ್ಧರಿಸಿದೆ.
ಆದರೆ, ಶಿಕ್ಷಕರನ್ನು ಶಿಕ್ಷಣೇತರ ಕಾರ್ಯಗಳಿಗೆ ಮತ್ತೆ ಮತ್ತೆ ಬಳಸುತ್ತಿರುವ ಕುರಿತು ಶಿಕ್ಷಕರ ವಲಯದಲ್ಲಿ ಚರ್ಚೆ ಮತ್ತು ಅಸಮಾಧಾನ ಮೂಡುವ ಸಾಧ್ಯತೆ ಕೂಡ ಇದೆ.
/karnataka-caste-census-2027-50-plus-teachers-duty-order

