
10 ವರ್ಷ ಕೆಲಸ ಮಾಡಿರುವ ನೌಕರರನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ದೇಹದಲ್ಲಿ ಶಕ್ತಿ ಇದ್ದಾಗ ದುಡಿಸಿ ಇಳಿ ವಯಸ್ಸಿನಲ್ಲಿ ಕೈಬಿಟ್ಟರೆ ದಂಡ ವಿಧಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಆನಂದು ಮತ್ತು ಈಶ್ವರ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕರ್ನಾಟಕ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಸಾಕ್ಷರತಾ ಸಹಾಯಕರಾಗಿ ಅರ್ಜಿದಾರರು ಮುರು ದಶಕಗಳಿಂದ ದುಡಿಯುತ್ತಿದ್ದರು. ಆದರೆ, ಮೂರು ದಶಕಗಳಿಂದಲೂ ದಿನಗೂಲಿ ನೌಕರರಾಗಿಯೇ ಸೇವೆ ಸಲ್ಲಿಸುತ್ತಿದ್ದ ಅವರ ನೇಮಕಾತಿಯನ್ನು ಖಾಯಂಗೊಳಿಸಬೇಕು ಎಂದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ತಾವು ಯುವಕರಾಗಿದ್ದ ಕಾಲದಿಂದ ದಿನಗೂಲಿ ನೌಕರರಾಗಿಯೇ ಸೇವೆ ಸಲ್ಲಿಸುತ್ತಿದ್ದೇವೆ. ಇದೀಗ ನಾವು ನಿವೃತ್ತ ಅಂಚಿನಲ್ಲಿ ಇದ್ದೇವೆ ಎಂದು ಅರ್ಜಿದಾರರು ನ್ಯಾಯಪೀಠದ ಮುಂದೆ ವಾದಿಸಿದ್ದರು. ಒಬ್ಬ ಅರ್ಜಿದಾರ 58 ವರ್ಷ ತಲುಪಿದ್ದು, 39 ವರ್ಷಗಳ ಸೇಎ ಸಲ್ಲಿಸಿದ್ದಾರೆ. ಇನ್ನೊಬ್ಬರು 32 ವರ್ಷ ಸೇವೆ ಸಲ್ಲಿಸಿದ್ದು ಇದೀಗ ಅವರ ಪ್ರಾಯ 54 ವರ್ಷಗಳಾಗಿವೆ.
ಯುವಕರಾಗಿದ್ದಾಗ ಭವಿಷ್ಯದ ಬಗ್ಗೆ ಚಿಂತಿಸದೆ ದುಡಿದಿರುವ ಈ ಇಬ್ಬರು ಅರ್ಜಿದಾರರು, ದಿನಗೂಲಿ ನೌಕರರಾಗಿಯೇ ಮೂರು ದಶಕಗಳನ್ನು ಕಳೆದಿದ್ದಾರೆ. ಇವರನ್ನು ಖಾಯಂ ಆಗಿ ನೇಮಕ ಮಾಡದಿದ್ದರೆ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಲಿ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸರ್ಕಾರಕ್ಕಾಗಿ ಸುದೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಿದ ದಿನಗೂಲಿ ನೌಕರರನ್ನು ತಮ್ಮ ಕೊನೆಯ ದಿನಗಳಲ್ಲಿ ಜೀವನೋಪಾಯಕ್ಕೆ ಅಲೆಯುವಂತೆ ಮಾಡಬಾರದು ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.