ಬೆಂಗಳೂರು: ಬಿರು ಬೇಸಿಗೆ ಹಿನ್ನೆಲೆ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸರ್ಕಾರಿ ಕಚೇರಿ ಕೆಲಸದ ವೇಳೆಯಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಿತ್ತೂರು ಕರ್ನಾಟಕದ ಈ ಜಿಲ್ಲೆಗಳಲ್ಲೂ ಕೆಲಸದ ಅವಧಿ ಬದಲಾವಣೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಸಂಬಂಧ ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದಿಂದ ನೌಕರರು ಕರ್ತವ್ಯ ನಿರ್ವಹಿಸುವಲ್ಲಿ ಎದುರಿಸುತ್ತಿರುವ ತೊಂದರೆಯನ್ನು ಮಾನವೀಯತೆ ದೃಷ್ಟಿಯಿಂದ ಪರಿಗಣಿಸಿ, ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಕಚೇರಿ ಕೆಲಸದ ಸಮಯ ಬದಲಾಯಿಸುವಂತೆ ಕೋರಿದ್ದರು.
ಬೆಳಗ್ಗೆ 8 ರಿಂದ ಮಧ್ಯಾಹ್ನ 1:30ರವರೆಗೆ ಮಾತ್ರ ಕೆಲಸ: ಈ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇನಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಬೆಳಗ್ಗೆ 10 ಸಂಜೆ 5.30 ವರೆಗಿನ ಸರ್ಕಾರಿ ಕಚೇರಿ ವೇಳಾಪಟ್ಟಿಯ ಬದಲಾಗಿ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಬದಲಾಯಿಸಿ ಆದೇಶಿಸಲಾಗಿದೆ.
ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಣೆಗೆ ಸೂಚನೆ: ಈ ಜಿಲ್ಲೆಗಳಲ್ಲಿನ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಎಂದಿನಂತೆ ಯಾವುದೇ ಲೋಪ/ಅಡೆತಡೆಯಿಲ್ಲದೇ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿ ಅನಾನುಕೂಲತೆಯಾಗದಂತೆ ಮತ್ತು ಜಿಲ್ಲಾಧಿಕಾರಿಗಳು/ಜಿಲ್ಲಾ ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಪರಿಮಿತಿಯಿಲ್ಲದೆ ಕರ್ತವ್ಯ ನಿರ್ವಹಿಸಬೇಕು ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.
