ನವದೆಹಲಿ: ರುಪೇ ಡೆಬಿಟ್ ಕಾರ್ಡ್ಗಳಿಗೆ (RuPay debit card) ಸರ್ಕಾರ ಸಬ್ಸಿಡಿ ನೆರವು ಹಿಂಪಡೆದಿರುವುದು ಈಗ ಡಿಜಿಟಲ್ ಪೇಮೆಂಟ್ ಉದ್ಯಮಕ್ಕೆ ನಷ್ಟದ ಚಿಂತೆ ಹುಟ್ಟಿಸಿದೆ. ಒಂದು ಅಂದಾಜು ಪ್ರಕಾರ, ಈ ಉದ್ಯಮಕ್ಕೆ 500-600 ಕೋಟಿ ರೂ ನಷ್ಟ ಆಗುವ ಸಾಧ್ಯತೆ ಇದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.

2024-25ರ ಹಣಕಾಸು ವರ್ಷಕ್ಕೆ ಸರ್ಕಾರ ಸಣ್ಣ ವರ್ತಕರ ಯುಪಿಐ ಪಾವತಿಗಳಿಗೆ ಮಾತ್ರವೇ 1,500 ಕೋಟಿ ರೂ ಸಬ್ಸಿಡಿ ನೀಡುತ್ತಿದೆ. ಹಿಂದಿನ ವರ್ಷಕ್ಕೆ ಸರ್ಕಾರ 3,681 ಕೋಟಿ ರೂ ಸಬ್ಸಿಡಿ ಒದಗಿಸಿತ್ತು. ಈ ಬಾರಿ ಸಬ್ಸಿಡಿ ಸುಮಾರು 5,500 ಕೋಟಿ ರೂಗೆ ಏರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಡಿಜಿಟಲ್ ಪೇಮೆಂಟ್ಸ್ ಉದ್ಯಮ, ಹಿಂದಿನ ವರ್ಷದಕ್ಕಿಂತಲೂ ಸಬ್ಸಿಡಿ ಕಡಿಮೆ ಆಗಿರುವುದು ನಿರಾಸೆಗೊಂಡಿದೆ.
ಏನಿದು ಯುಪಿಐ ಪೇಮೆಂಟ್ ಸಬ್ಸಿಡಿ ಸ್ಕೀಮ್?
ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ವರ್ತಕರಿಗೆ ಹಣ ಪಾವತಿಸಿದಾಗ, ಅದಕ್ಕೆ ಬ್ಯಾಂಕುಗಳು ಆ ವರ್ತಕರಿಗೆ ನಿರ್ದಿಷ್ಟ ಎಂಡಿಆರ್ ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕವನ್ನು ವಿಧಿಸುತ್ತವೆ. ಯುಪಿಐ ಟ್ರಾನ್ಸಾಕ್ಷನ್ಗೂ ಎಂಡಿಆರ್ ಶುಲ್ಕ ಇರುತ್ತದೆ. ಅಂದರೆ, ವರ್ತಕರು ಬ್ಯಾಂಕುಗಳಿಗೆ ಈ ಶುಲ್ಕ ತೆರಬೇಕು.
ಸರ್ಕಾರವು ಯುಪಿಐ ಹಣ ಪಾವತಿ ವ್ಯವಸ್ಥೆಯನ್ನು ಬಲಪಡಿಸುವ ದೃಷ್ಟಿಯಿಂದ ಝೀರೋ ಎಂಡಿಆರ್ ಸೌಲಭ್ಯ ತಂದಿತು. ಅಂದರೆ, ಬ್ಯಾಂಕುಗಳು ವರ್ತಕರಿಗೆ ಶುಲ್ಕ ವಿಧಿಸಬಾರದು. ಆ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಇದಕ್ಕಾಗಿ ಸರ್ಕಾರವು ಸಬ್ಸಿಡಿ ಸ್ಕೀಮ್ ಆರಂಭಿಸಿತು. ಈಗ ಈ ಸಬ್ಸಿಡಿಯನ್ನು ಸರ್ಕಾರ ಮೊಟಕುಗೊಳಿಸಿರುವುದು ಬ್ಯಾಂಕುಗಳಿಗೆ ಚಿಂತೆ ತಂದಿದೆ.
