ಹಾಸನ: ನಗರದ ಬಿ. ಕಾಟಿಹಳ್ಳಿ ಎಸ್ಬಿಎಂ ಬಡಾವಣೆಯ ಎಸ್ಬಿಎಂ ಉದ್ಯಾನವನದಲ್ಲಿ, ಇಂದು ಹಾಸನಾಂಬ ಲಯನ್ಸ್ ಕ್ಲಬ್ ವತಿಯಿಂದ ಹಸಿರು ಅಭಿಯಾನದ ಅಂಗವಾಗಿ 70ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ನ ಮುಖ್ಯಸ್ಥ ಉಡುಪಿ ಅರವಿಂದ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಹರೀಶ್, ಹಾಗೂ ಎಸ್ಬಿಎಂ ಬಡಾವಣೆಯ ಅಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಶಿವೇಗೌಡ, ಉಪಾಧ್ಯಕ್ಷ ಸುರೇಶ್, ರಾಮಸ್ವಾಮಿ, ರಂಗಸ್ವಾಮಿ, ಸತೀಶ್ ಮತ್ತು ಇತರ ಸದಸ್ಯರು, ಸ್ಥಳೀಯ ನಿವಾಸಿಗಳು ಭಾಗವಹಿಸಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಬಡಾವಣೆಯ ಅಧ್ಯಕ್ಷ ರಂಗೇಗೌಡ ಅವರು, “ನಮ್ಮ ಎಸ್ಬಿಎಂ ಬಡಾವಣೆಯಲ್ಲಿ ಹಲವು ಸಮಸ್ಯೆಗಳಿವೆ. ಮುಂದಿನ ದಿನಗಳಲ್ಲಿ ಶಾಸಕರಾದ ಸ್ವರೂಪ್ ಪ್ರಕಾಶ್ ಅವರನ್ನು ಭೇಟಿಯಾಗಿ, ಬಡಾವಣೆಯ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಳ್ಳುವ ಜೊತೆಗೆ, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕುಂದು ಕೊರತೆಗಳ ಬಗ್ಗೆ ಮನವಿ ಸಲ್ಲಿಸುತ್ತೇವೆ,” ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಸದಸ್ಯರು ಈ ಹಸಿರು ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಸಿ, ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದಾರೆ.
