ಹಾಸನ: ಜಿಲ್ಲೆಯ ಹೊಸಮಠ ಗ್ರಾಮದಲ್ಲಿನ ಕ್ರೈಸ್ತ ಧರ್ಮದ ಪವಿತ್ರ ಸ್ಥಳವಾದ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ ಶಿಲುಬೆ ಬೆಟ್ಟದಲ್ಲಿ ಹಲವಾರು ದಿನದಿಂದ ಗಣಿಗಾರಿಕೆ ನಡೆಯುತ್ತಿದೆ. ಬಂಡೆ ಸಿಡಿಸಲು ಬಳಸುವ ಸ್ಪೋಟದ ತೀವ್ರತೆಗೆ ಬೆಟ್ಟದ ಸುತ್ತಮುತ್ತಲ ಹಳ್ಳಿಗಳಲ್ಲಿನ ಮನೆಗಳು ಬಿರುಕು ಬಿಟ್ಟಿದೆ. ಭಾರಿ ವಾಹನಗಳ ಸಂಚಾರದಿಂದ ರಸ್ತೆಯು ಹಾಳಾಗಿದ್ದು ಸ್ಫೋಟದ ತೀವ್ರತೆಗೆ ಕಾಡುಪ್ರಾಣಿಗಳು, ಆನೆಗಳು, ಜನರು ವಾಸಿಸುವ ಸ್ಥಳಗಳತ್ತ ಬರುತ್ತಿದೆ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವರಿಕೆ ಮಾಡಿದರು.
ಗಣಿಗಾರಿಕೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕೃಷಿ ಚಟುವಟಿಕೆ ಮಾಡಲು ಬಹಳ ತೊಂದರೆಯಾಗುತ್ತಿದೆ. ರಸ್ತೆ ಹಾಳಾಗಿರುವುದರಿಂದ ಶಾಲಾ ವಾಹನಗಳು ತರಲು ನಿರಾಕರಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಮಳೆಗಾಲದಲ್ಲಿ ಕೃಷಿ ಭೂಮಿಗೆ ಕಲುಷಿತ ನೀರು ಮತ್ತು ಧೂಳಿನಿಂದಾಗಿ ಕಾಫಿ ಮೆಣಸು, ಭತ್ತ ಮುಂತಾದ ಬೆಳೆಯ ಹಾಳಾಗುತ್ತಿದೆ. ಆದ್ದರಿಂದ ಗಣಿಗಾರಿಕೆ ಸ್ಥಗಿತಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮೈಕ್ರೋಫೈನಾನ್ಸ್ ಬಡ್ಡಿ ದಂಧೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದರು. ಬಲವಂತವಾಗಿ ಹಣ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ ವಿರುದ್ಧ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲಿನ ಕೆಲ ಫೈನಾನ್ಸ್ ಗಳು 25 ರಿಂದ 35 ಪಸೆರ್ಂಟ್ ಬಡ್ಡಿಯನ್ನು ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ ಎಂದು ಡಿಸಿ ಗಮನಕ್ಕೆ ತಂದರು.
ರೈತ ಸಂಘದ ಆನೆಕೆರೆ ರವಿ, ಮೊಹಮ್ಮದ್ ಸಾಧಿಕ್, ಬಾಬು, ವೆಂಕಟೇಶಗೌಡ, ಪವಿತ್ರ, ಜಯಣ್ಣ, ರಕ್ಷಣಾ ವೇದಿಕೆಯ ಸತೀಶ್ ಪಟೇಲ್, ಸುಧಾ ಗಿರೀಶ್, ಶಶಿ ಗೌಡ, ಹೊಸಮಠ, ಕಲ್ಲುಕೊಪ್ಪಲು, ಮಠದ ಕೊಪ್ಪಲು, ಹಾರೋಹಳ್ಳಿ, ನವಿಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು.
