ಗುಂಡ ಮೌನ ಮುನಿಗಳೊಂದಿಗೆ ಒಂದು ಪ್ರಶ್ನೆ ಹಾಕಿದ “ಗುರುಗಳೇ, ನನಗೆ ತುಂಬಾ ದಿನದಿಂದ ಒಂದು ಅನುಮಾನ ಕಾಡುತ್ತಿದೆ. ಅದೇನೆಂದರೆ, ಈಗ ನಾವು ನಮ್ಮನ್ನು ಕಂಡುಕೊಳ್ಳಲು ಕನ್ನಡಿ ಇದೆ. ಅದರಲ್ಲಿ ನಮ್ಮ ರೂಪ ಹೇಗೆ ಇದೆ ಎಂದು ನೋಡಿಕೊಳ್ಳುತ್ತೇವೆ. ಆದರೆ ಕನ್ನಡಿಯನ್ನು ಕಂಡು ಹಿಡಿಯುವ ಮುಂಚೆ ನಮ್ಮ ಪೂರ್ವಜರು ಹೇಗೆ ತಮ್ಮನ್ನು ನೋಡಿಕೊಳ್ಳುತ್ತಿದ್ದರು”.
ಪೆದ್ದ ಗುಂಡನಿಗೆ ಇಂಥ ಪ್ರಶ್ನೆ ಹೇಗೆ ಉದ್ಭವಿಸಿತು ಎಂದು ಆಶ್ಚರ್ಯವಾಯಿತಾದರೂ, ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದಾನೆ ಎಂದುಕೊಂಡು ಮೌನ ಮುನಿಗಳು ಉತ್ತರಿಸಲು ಮುಂದಾದರು. “ಶಿವನ ತೊಡೆಯ ಮೇಲೆ ಅಸೀನಳಾದ ಪಾರ್ವತಿಯು ಪತಿಯನ್ನು ಕುರಿತು ‘ನಿನ್ನ ಲೀಲೆಯೇ ಅರ್ಥವಾಗುವುದಿಲ್ಲ’ ಎಂದಾಗ, ‘ಪ್ರಿಯೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು’ ಅಂದನು ಶಿವ. ಆಗ ಪಾರ್ವತಿಯು ತನ್ನ ಬಿಂಬವನ್ನು ಕಂಡಳು. ಆದರೆ ಶಿವ ನಿರಾಕಾರ ಆಗಿದ್ದರಿಂದ ಪಾರ್ವತಿಯ ಕಣ್ಣಿನಲ್ಲಿ ಶಿವ ಕಾಣಲಿಲ್ಲ. ಅದೇ ಶಿವಲೀಲೆ”. ಮೌನ ಮುನಿಗಳು ಮುಂದುವರಿಸುತ್ತಾ ಈ ಲೀಲೆಯನ್ನು ಕುರಿತು
“ನಾವೆಲ್ಲರು ಧ್ಯಾನಚಿತ್ತರಾಗಿ ಸಹಸ್ರಾರು ವರ್ಷಗಳ ಹಿಂದೆ ಸರಿಯೋಣ. ನಾವು ಎಂಬ ರೂಪರೇಖೆಗಳು ಕಣ್ಣಿನ ಪ್ರತಿಫಲನದ ಮೂಲಕ ತಿಳಿದು ನಾವು ಎನ್ನುವ ಅಸ್ತಿತ್ವವನ್ನು ಕಂಡುಕೊಂಡಿದ್ದೇವೆ. ಈ ತತ್ವ ಸಪಿಂಡರ ನಡುವೆ ಅಲ್ಲದೆ ಗಂಡು ಮತ್ತು ಹೆಣ್ಣಿನ ಮಧ್ಯೆ ಪಾವಿತ್ರತೆಯ ಪ್ರೇಮಾಂಕುರದ ಬಂಧನದಿಂದ ಆಗುವಂತಹ ಸನ್ನಿವೇಶ. ಅಂದರೆ ತನ್ನ ರೂಪವನ್ನು ತಿಳಿಯುವ ಕುತೂಹಲ ಪ್ರೇಮದಿಂದ ಮಾತ್ರ ಸಾಧ್ಯ. ಹಿಂದೆ ಈ ಸತ್ಯ ಮಿಥ್ಯವಾಗಿದ್ದಲ್ಲಿ ನಮ್ಮ ಅಸ್ತಿತ್ವವೇ ಇಲ್ಲದಂತಾಗುತ್ತಿತ್ತೋ ಏನೋ ತಿಳಿಯದು. ಈ ಕಾರಣದಿಂದ ಭೂಲೋಕದಲ್ಲಿ ಕಣ್ಣುಗಳ ನಡುವೆ ಪ್ರೇಮ ಮಧುರ ಭಾವವಿತ್ತು ಎಂಬುದು ತಂತ್ರ ವಿಜ್ಞಾನದಲ್ಲಿ ಹೇಳಲ್ಪಟ್ಟಿದೆ.
ಆದರೆ ಪ್ರಸ್ತುತದಲ್ಲಿ ಎಲ್ಲಾ ತಲೆಕೆಳಗಾಗಿವೆ. ಇದರ ಕಾರಣ ಅನ್ವೇಷಣೆಗೊಂಡ ಕನ್ನಡಿ. ಈ ಕನ್ನಡಿಯ ಆವಿಷ್ಕಾರದಿಂದ ವ್ಯಕ್ತಿಯು ಎರಡನೇ ದೃಶ್ಯ ಆಯಾಮದಲ್ಲಿ ಪ್ರತಿಫಲಿಸಿ ಪ್ರೀತಿ, ಪ್ರೇಮ, ಮಧುರ ಭಾವಗಳನ್ನು ಮರೆತು ಬಿಟ್ಟಿದ್ದಾನೆ.
ಹೆಣ್ಣು, ಗಂಡು ಪರಸ್ಪರ ಕಣ್ಣಿನಲ್ಲಿ ಮನಸ್ಸುಗಳನ್ನು ನೋಡಿ ಬಾಂಧವ್ಯಗಳನ್ನು ತಿಳಿದುಕೊಳ್ಳುವ ಬದಲು ತಮ್ಮ ಪ್ರತಿ ಬಿಂಬದಲ್ಲಿ ಬೆಳಸಿದ ಮಾಂಸಕಂಡಗಳನ್ನು ಅಥವ ಸೌಂದರ್ಯವನ್ನು ನೋಡಿ ವಿಕೃತ ಮನೋಭಾವನೆಗಳನ್ನು ಹೊಂದಿರುವವರಾಗಿದ್ದಾರೆ. ನಮ್ಮ ಪ್ರತಿಬಿಂಬವನ್ನು ಕಣ್ಣಿನ ಬದಲು ನೀರಿನಲ್ಲಿ ನೋಡಬಹುದಿತ್ತಲ್ಲ ಎನಿಸಬಹುದು, ಆದರೆ ನೀರಿನ ಪ್ರತಿಬಿಂಬ ಕಣ್ಣಿನಷ್ಟು ಸ್ಪಷ್ಟ ಮತ್ತು ಪವಿತ್ರವಾಗಿರಲು ಸಾಧ್ಯವಿಲ್ಲ.
ಪ್ರೇಮಾಂಕುರದ ಭಾವ ಪರವಶದಲ್ಲಿ ಮತ್ತು ಪವಿತ್ರ ಐಕ್ಯ ಮಹೋತ್ಸವದಲ್ಲಿ ನಾವು ಹುಟ್ಟಿದ್ದೇವೆ. ಇಲ್ಲವಾದಲ್ಲಿ ಮಾನವ ಕುಲವೇ ಇರುತ್ತಿರಲಿಲ್ಲ. ಆ ಪವಿತ್ರ ಐಕ್ಯಾ ಮನೋಭಾವವನ್ನು ಕಾಮಕೇಳಿಗೆ ಪರಿವರ್ತಿಸಿ ಕಾಮಾಂಧರಾಗಿದ್ದೇವೆ. ಹೆಣ್ಣು ಹೆಣ್ಣೆಂಬ ಭಾವನೆ ವಿಮುಖವಾಗಿ, ಗಂಡು ಗಂಡೆಂಬ ಅಹಂಕಾರ ದುರ್ನಡತೆಗಳ ಮನೋನ್ಯೂನತೆಗಳಿಂದ ಪರಿತಪಿಸುತ್ತಿದ್ದಾರೆ.

ಈ ಸುಂದರ ಲೋಕವನ್ನು ಅಸುರ ಲೋಕವಾಗಿ ಪರಿವರ್ತಿಸಿ, ಸೃಜನ ಶೀಲತೆಯು ಸುರಪಾನದಿಂದ ಮರೆಮಾಚಿಸಿ ವಿಕೃತ ಮನೋಭಾವನೆಗಳನ್ನು ಸ್ವಾಗತಿಸಿಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಗಂಡು, ಹೆಣ್ಣುಗಳ ಅರ್ಥಗಳನ್ನು ಕಳೆದು ಕೊಳ್ಳುತ್ತಿದ್ದೇವೆ. ಅನ್ಯೋನ್ಯ ಬಂಧಗಳು ಕಳಚುತ್ತಿವೆ. ಗಂಡು ಎಂಬ ಶಕ್ತಿಯ ಅಹಂಕಾರದ ದುರ್ನಡತೆಗೆ ಹೆಣ್ಣೆಂಬ ಅಬಲೆ ಆಟಿಕೆಗಳಂತೆ ಬಲಿಪಶುವಾಗುತ್ತಿದ್ದಾಳೆ. ಆದರೆ ಆಕೆ ತಿಳಿದುಕೊಳ್ಳಬೇಕಾಗುವ ವಿಷಯ ತನ್ನ ಕರ್ತವ್ಯ ನಿಷ್ಠೆಯನ್ನು ಮರೆಯಬಾರದು. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ಹೋರಾಡಬೇಕು.ಗಂಡು ಗಂಡೆಂಬ ಅಹಂಕಾರವನ್ನು ತಣಿಸುವಂತಹ ಸಾಧನವನ್ನು ಗಂಡು ಕಂಡುಕೊಳ್ಳಬೇಕು. ಅವರವರ ಕರ್ತವ್ಯ ನಿಷ್ಠೆ, ಧನಾತ್ಮಕ ಭಾವನೆ, ವಿವೇಕ ಚಿತ್ತ ಪ್ರೇಮಾನುಭವ, ಪ್ರೀತಿಯ ಮನೋಭಾವ ಮತ್ತು ಆತ್ಮಾವಲೋಕಗಳನ್ನು ಮಾಡಿಕೊಂಡರೆ ಇಡೀ ಸಮಸ್ತ ಜೀವಿಗಳಲ್ಲಿ ಮಾಧುರ್ಯತೆಯನ್ನು ಕಂಡುಕೊಳ್ಳುವುರಾಗುತ್ತೇವೆ” ಎಂದು ಗುಂಡನಿಗೆ ಅರ್ಥವಾಗುವಂತೆ ವಿವರಿಸಿ ಹೇಳಿದರು.
ಸ್ನೇಹಿತರೇ, ಇಡೀ ಮನುಕುಲವೇ ನಾಚುವಂತಹ ಹೇಯ ಕೃತ್ಯವನ್ನು ದೇಶದ ರಾಜಧಾನಿಯಲ್ಲಿ (ನಿರ್ಭಯ) ನಡೆದಿರುವುದನ್ನು ನಾವೆಲ್ಲ ಗಮನಿಸಿದ್ದೇವೆ. (ಇಂತಹ ಎಷ್ಟೋ ಘಟನೆಗಳು ಬೆಳಕಿಗೆ ಬರುವುದೇ ಇಲ್ಲ, ಅದು ಬೇರೆ ವಿಚಾರ) ನಾನೊಬ್ಬ ಮನೋ ವೈದ್ಯನಾಗಿರುವುದರಿಂದ ಸತ್ಯಾಸತ್ಯತೆಗಳ ಕೊರತೆಯಿಂದಲೋ, ಪ್ರಾಥಮಿಕ ದೃಷ್ಟಿಕೋನ ಅಭಾವದಿಂದಲೋ ಹಾಗೂ ಸಾಂದರ್ಭಿಕ ವಿಚಾರ ವಿಲಕ್ಷಣ ಕಾರಣದಿಂದಲೋ, ಧರ್ಮಕ್ಕೆ ಅಪಮಾನವೋ, ಸಂಸ್ಕೃತಿಗೆ ಧಕ್ಕೆ ಮತ್ತು ಮಾನವ ತತ್ವಗಳು ಇಂದು ಇಲ್ಲದಂತಾಗಿವೆ ಎಂದು ನನಗೆ ಅನಿಸುತ್ತದೆ. ಇಲ್ಲಿ ಗಮನಿಸಬೇಕಾರುವುದು ಹೀನಾಯ ಕೃತ್ಯ ಮತ್ತು ಹಿಂಸಾ ಪ್ರವೃತ್ತಿ.

ವ್ಯಭಿಚಾರ ಕ್ರೂರ ಮತ್ತು ವಿಕೃತ ನಡತೆಗಳು ಅಸಹಜವಾಗಿ ಕಂಡು ಬಂದರೆ ಕಾನೂನಿನ ಚೌಕಟ್ಟಿನಡಿಯಲ್ಲಿ ಸಾಬೀತುಪಡಿಸಿದರೆ ಶಿಕ್ಷೆಯನ್ನು ಘೋಷಿಸುವರು. ಇದು ಶೇ.30ರಷ್ಟು ಆದರೆ, ಇನ್ನುಳಿದ ಶೇ.70ರಷ್ಟರಲ್ಲಿ ಇಲ್ಲದ ಅಪವಾದ ಹೊರಿಸಿ ಅಮಾಯಕರನ್ನು ಶಿಕ್ಷೆಗೆ ಗುರಿಪಡಿಸುವುದು ಇನ್ನೊಂದು ಮುಖ.
ಅಪರಾದಿಗಳಿಗೆ ಕಠಿಣ ಶಿಕ್ಷೆಯಾದ ಪಾಸಿ (ನೇಣು) ಒಂದೇ ಉತ್ತರವಲ್ಲ. ನಮ್ಮ ದೃಷ್ಟಿಯಲ್ಲಿ ಇಲ್ಲಿಯ ಅಪರಾದ, ಅಪರಾಧ ಎಸಗಿದ ರೀತಿ ಹಾಗೂ ಹೀನಾಯ ಕೃತ್ಯಗಳನ್ನು ಅರಿತು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ಸೌಕರ್ಯದಿಂದ ಸಮರ್ಪಕವಾದ ಶಿಕ್ಷೆ ನೀಡಬೇಕು. ಆರಕ್ಷಕರು, ಕಾನೂನು ತಜ್ಞರು, ಜನಪ್ರತಿನಿಧಿಗಳು ಎಷ್ಟೇ ಇದ್ದರೂ ಹಾಗೂ ತಾಂತ್ರಕತೆಯಲ್ಲಿ ಎಷ್ಟೇ ಮುಂಚೂಣಿಯಲ್ಲಿದ್ದರೂ, ಇಂತಹ ಕೃತ್ಯಗಳನ್ನು ನಿಲ್ಲಿಸಲು ಸಾಧ್ಯವಾಗಿಲ್ಲ, ಆಗುವುದೂ ಇಲ್ಲ. ಈ ರೀತಿಯ ದುಷ್ಕೃತ್ಯಗಳು ನಿಲ್ಲಿಸಬೇಕಾದರೆ ಪ್ರೀತಿ, ವಾತ್ಸಲ್ಯ, ಮಮಕಾರ ಮತ್ತು ಸಧ್ಬಾವನ ಸಾಧನೆಗಳನ್ನು ಧನಾತ್ಮಕವಾಗಿ ಮತ್ತು ವಿವೇಕಯುತವಾಗಿ ವೃದ್ಧಿಸಬೇಕು. ನಾವು ಪರಿವರ್ತನೆ ಮತ್ತು ವಿಕಾಸವಾಗಬೇಕಾದರೆ ಶಿಕ್ಷಣ, ಮಾನವ ಹಕ್ಕಿನ ಉದ್ದೇಶ, ಮೂಲಭೂತ ಹಕ್ಕುಗಳ ಪ್ರತಿಪಾದನೆ, ಚಿಂತನಾ ಶೀಲತೆ, ಹಾಗೂ ಆರ್ಥಿಕ ಸ್ವಾವಲಂಬನೆಗಳು ಬೇಕಾಗುವವು.
ಅಂತಹ ವ್ಯಭಿಚಾರ ಘಟನೆಯ ಆಧಾರದ ಮೇಲೆ ಮಾರಣಾಂತಿಕ ಕೃತ್ಯಕ್ಕೆ ಒಳಗಾದ ವ್ಯಕ್ತಿಯ ನಡವಳಿಕೆ, ಹೇಯ ಕೃತ್ಯ ಎಸಗಿದ ವ್ಯಕ್ತಿಗಳು ನಶೆಯಿಂದ ಬಳಲುತ್ತಿದ್ದರಾ ಮತ್ತು ಮನೋ ವಿಕೃತಭಾವ ಹೊಂದಿದ್ದಾರಾ ಎಂಬುದು ಕೆಲವರ ಪ್ರಶ್ನೆ ಆಗಿವೆ.
ಘಟನೆ ಸಂಭವಿಸಿದ ನಂತರ ಆಕ್ರೋಶ ಸಹಜ. ಆದರೆ ಆಕ್ರೋಶ ಹಿಂಸೆಗೆ ತಿರುಗಬಾರದು. ಏನೇ ಆಗಲಿ, ತ್ವರಿತವಾಗಿ ನ್ಯಾಯ ಒದಗಿಸಿಕೊಟ್ಟರೆ ಅನ್ಯಾಯಕ್ಕೆ ಅಥವಾ ಆಘಾತಕ್ಕೆ ಒಳಗಾದವರಿಗೆ ಗೌರವ ಕೊಟ್ಟಂತಾಗುವುದು. ಇದೇ ನಮ್ಮೆಲ್ಲರ ಹಾರೈಕೆ….
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

