ಹನೂರು :- ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ಧಾಮದ ಅಂಡೇಕುರುಬರದೊಡ್ಡಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಶ್ರೀಗಂಧದ ಮರವನ್ನು ಕತ್ತರಿಸುತ್ತಿದ್ದ ಇಬ್ಬರಲ್ಲಿ ಒಬ್ಬನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ಬಂಧಿತನನ್ನು ಪಿ.ಜಿ. ಪಾಳ್ಯ ಸಮೀಪದ ಅಂಡೇಕುರುಬರದೊಡ್ಡಿಯ ಚನ್ನಬಸವಣ್ಣ (45) ಎಂದು ಗುರುತಿಸಲಾಗಿದೆ. ಇದೇ ಗ್ರಾಮದ ಜಡೇಯಪ್ಪ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಮಾಹಿತಿಯಂತೆ, ಈ ಇಬ್ಬರು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧದ ಮರವನ್ನು ಕತ್ತರಿಸಿ ತುಂಡರಿಸುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ದಾಳಿ ನಡೆಸಿದರು. ದಾಳಿಯ ವೇಳೆ ಚನ್ನಬಸವಣ್ಣ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರೆ, ಜಡೇಯಪ್ಪ ಅಲ್ಲಿ ಪರಾರಿಯಾದನು.
ಘಟನೆಯ ಬಗ್ಗೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಡಿಸಿಎಫ್ ಭಾಸ್ಕರ್, ಎಸಿಎಫ್ ಶಿವರಾಮು ಅವರ ಮಾರ್ಗದರ್ಶನದಲ್ಲಿ ಆರ್ಎಫ್ಒ ಪುಟ್ಟರಾಜು ಅವರು ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದು, ಬಂಧಿತ ಆರೋಪಿ ಚನ್ನಬಸವಣ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪರಾರಿಯಾಗಿರುವ ಜಡೇಯಪ್ಪನ ಬಂಧನಕ್ಕಾಗಿ ಅರಣ್ಯ ಇಲಾಖೆ ಬಲೆ ಬೀಸಿದೆ.
