ಡಿಸೆಂಬರ್ 12, 2025: JSW ಸ್ಪೋರ್ಟ್ಸ್ ಬೆಂಬಲಿತ ಹರಿಯಾಣ ಸ್ಟೀಲರ್ಸ್ ಕಬಡ್ಡಿ ತಂಡವು ಯುವ ಕ್ರೀಡಾಪಟುಗಳಿಗೆ ಚಿನ್ನದ ಅವಕಾಶ ಒದಗಿಸುವ ನಿಟ್ಟಿನಲ್ಲಿ ರೋಹ್ತಕ್ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಅತ್ಯಾಧುನಿಕ ಕಬಡ್ಡಿ ಅಕಾಡೆಮಿಯನ್ನು ಅಧಿಕೃತವಾಗಿ ಉದ್ಘಾಟಿಸಿದೆ.
ಭಾರತದ ಮುಂದಿನ ತಲೆಮಾರಿನ ಕಬಡ್ಡಿ ಪ್ರತಿಭೆಯನ್ನು ಬೆಳೆಸುವ ಗುರಿ ಹೊಂದಿರುವ ಈ ಅಕಾಡೆಮಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಟ್ರಯಲ್ಗಳು ಮತ್ತು ಟೂರ್ನಮೆಂಟ್ಗಳ ಮೂಲಕ 17 ರಿಂದ 22 ವರ್ಷದ 30 ಪ್ರತಿಭಾಶಾಲಿ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
2024ರ PKL-11 ಚಾಂಪಿಯನ್ ಆದ ಹರಿಯಾಣ ಸ್ಟೀಲರ್ಸ್ ಹಾಗೂ JSW ಸ್ಪೋರ್ಟ್ಸ್ನ ಪರಿಣಿತರ ಮಾರ್ಗದರ್ಶನದಲ್ಲಿ ಈ ಆಟಗಾರರು ವೈಜ್ಞಾನಿಕ ತರಬೇತಿ, ತಂತ್ರಜ್ಞಾನಾಧಾರಿತ ವಿಶ್ಲೇಷಣೆ ಹಾಗೂ ಅತ್ಯುತ್ತಮ ಕ್ರೀಡಾ ಸೌಲಭ್ಯಗಳೊಂದಿಗೆ ತರಬೇತಿ ಪಡೆಯಲಿದ್ದಾರೆ. PKL ಯುವ ಯೋಜನೆ ಮತ್ತು JSW ಯುವ ಆಟಗಾರರ ಅಭಿವೃದ್ದಿ ಯೋಜನೆಯ ಸಹಯೋಗದಿಂದ ಯುವ ಪ್ರತಿಭೆಗಳಿಗೆ ದೀರ್ಘಕಾಲಿಕ ವೃತ್ತಿಜೀವನದ ದಾರಿಯನ್ನು ಸುಗಮಗೊಳಿಸಲಾಗುತ್ತದೆ.
ಇದನ್ನು ಓದು: ಭಾರತದಲ್ಲಿ ಮೊದಲ UCI 2.2 ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026ಕ್ಕೆ ವೇದಿಕೆ ಸಿದ್ಧ
ಕ್ರೀಡಾಪಟುಗಳಿಗೆ ಪೂರ್ಣ ವಿದ್ಯಾರ್ಥಿವೇತನ ನೀಡಲಾಗಿದ್ದು, ಇದರಲ್ಲಿ ಟ್ಯೂಷನ್, ವಸತಿ, ಪೌಷ್ಟಿಕ ಆಹಾರ, ವೈದ್ಯಕೀಯ ಸಹಾಯ ಮತ್ತು ಅತಿ ಉನ್ನತ ಮಟ್ಟದ ತರಬೇತಿ ಒಳಗೊಂಡಿವೆ. ಅಲ್ಲದೆ ಹರಿಯಾಣ ಸ್ಟೀಲರ್ಸ್ ತಂಡದ ಹೆಸರಿನಲ್ಲಿ ವರ್ಷಪೂರ್ತಿ ನಡೆಯುವ ಹಳ್ಳಿಮಟ್ಟದ ಟೂರ್ನಮೆಂಟ್ಗಳಲ್ಲಿ ಸ್ಪರ್ಧಾತ್ಮಕ ಅನುಭವ ಪಡೆಯುವ ಅವಕಾಶ ಕೂಡ ಕಲ್ಪಿಸಲಾಗಿದೆ.
JSW ಸ್ಪೋರ್ಟ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಈ ಅಕಾಡೆಮಿ ಮೂಲಕ ದೇಶದಲ್ಲಿ ಕಬಡ್ಡಿಯ ಭವಿಷ್ಯವನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸ ವ್ಯಕ್ತಪಡಿಸಿದೆ.
