ಹಾಸನ: ಸಾಮಾಜಿಕ ವ್ಯವಸ್ಥೆಯಲ್ಲಿ ಶತಮಾನಗಳಿಂದಲೂ ತೀರಾ ಹಿಂದುಳಿದ ಸಮುದಾಯಗಳನ್ನು ಮೇಲೆತ್ತುವ ಆಶಯಗಳೊಂದಿಗೆ ಪ್ರಸ್ತುತ ದೃಶ್ಯ ಜಾತಿಗಳೊಂದಿಗೆ ಸೇರಿಸಿರುವ ೫೯ ಅಲೆಮಾರಿ ಸಮುದಾಯಗಳನ್ನು ಅವರುಗಳಿಂದ ಬೇರ್ಪಡಿಸಿ ಶೆ.೧ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ನಿಗಧಿಪಡಿಸುವಂತೆ ಕರ್ನಾಟಕ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಎಂ.ಟಿ. ವೆಂಕಟೇಶ್ ಸರ್ಕಾರಕ್ಕೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನದಂತೆ ಪ್ರವರ್ಗ-೧ ಮತ್ತು ೦೨ರಲ್ಲಿರುವ ಎರಡು ಸಮುದಾಯಗಳಾದ ಮಾದಿಗ ಮತ್ತು ಛಲವಾದಿರವರು ಆದಿ ಆಂದ್ರ, ಆದಿಕರ್ನಾಟಕ ಮತ್ತು ಆದಿದ್ರಾವಿಡ ಜಾತಿ ಸೂಚಕ ಪದದ ಮೇಲೆ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವುದರಿಂದ ಈಗಾಗಲೇ ಸರ್ಕಾರವು ನೀಡಿರುವ ಆದಿ ಆಂಧ್ರ, ಆದಿಕರ್ನಾಟಕ ಮತ್ತು ಆದಿದ್ರಾವಿಡ ಜಾತಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ತಮ್ಮಗಳ ಮೂಲ ಜಾತಿಯ ಹೆಸರಿನಿಂದ ಪ್ರಮಾಣ ಪತ್ರವನ್ನು ಪರಿಷ್ಕರಿಸುವ ಮೂಲ ಜಾತಿ ಪ್ರಮಾಣ ಪತ್ರವನ್ನು ಪಡೆಯುವಂತೆ ಸೂಕ್ತ ಸುತ್ತೋಲೆಯನ್ನು ಹೊರಡಿಸುವಂತೆ ಕೋರುತ್ತೇವೆ. ಸಚಿವ ಸಂಪುಟದ ತೀರ್ಮಾನದಂತೆ ಮಾದಿಗ ಮತ್ತು ಅದರ ಸಂಬಂದಿತ ಸಮುದಾಯಗಳಿಗೆ ಇದುವರೆವಿಗೂ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಬ್ಯಾಕ್ಲಾಗ್ ಹುದ್ದೆಗಳನ್ನು ಗುರುತಿಸಿ ಕೂಡಲೇ ಪ್ರತ್ಯೇಕವಾಗಿ ನೇಮಕಾತಿ ಮಾಡಲು ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದರು.
ಪ್ರಸ್ತುತ ೨೦೨೫-೨೬ನೇ ಸಾಲಿನಲ್ಲಿ ವೃತ್ತಿ ಶಿಕ್ಷಣಗಳಲ್ಲಿ ನಡೆಯುತ್ತಿರುವ ಪ್ರದೇಶಗಳಲ್ಲಿ ಮಾದಿಗ ಮತ್ತು ಅದರ ಸಂಬಂದಿತ ಸಮುದಾಯಗಳಿಗೆ ಶೇ.೬ರಷ್ಟು ಪ್ರವೇಶವನ್ನು ನೀಡಲು ಪರೀಕ್ಷಾ ಪ್ರಾಧಿಕಾರಕ್ಕೆ ಆದೇಶವನ್ನು ಹೊರಡಿಸುವಂತೆ ಮತ್ತು ಅಲ್ಲಿಯವರೆಗೆ ಪ್ರವೇಶ ನಡೆಸದಂತೆ ಸೂಕ್ತ ಸುತ್ತೋಲೆ ಹೊರಡಿಸುವಂತೆ ಕೋರುತ್ತೇವೆ. ರಾಜಕೀಯ ಕ್ಷೇತ್ರಗಳಲ್ಲಿ ಗ್ರಾಮ ಮಟ್ಟದಿಂದ ಹಿಡಿದು ಸಂಸತ್ ಮಟ್ಟದವರೆಗೆ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ೬:೬:೫ರ ಅನುಪಾತದಲ್ಲಿ ಮೀಸಲಾತಿಯನ್ನು ನಿಗಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸುತ್ತೇವೆ ಎಂದು ಹೇಳಿದರು ಮುಂದಿನ ೨೦೨೬-೨೭ನೇ ಸಾಲಿನಿಂದ ರಾಜ್ಯ ಸರ್ಕಾರವು ಆಯವ್ಯವನ್ನು ಮಂಡಿಸುವಾಗ ಮೇಲ್ಕಂಡ ಸರ್ಕಾರದ ಆದೇಶದಂತೆ ಸರ್ಕಾರದ ಒಟ್ಟಾರೆ ಆಯವ್ಯಯದಲ್ಲಿ ಶೇ.೬ರಷ್ಟು ಅನುದಾನವನ್ನು ಪ್ರವರ್ಗ-ಎ ವರ್ಗಗಳ ಸಮುದಾಯಗಳ ಅಭಿವೃದ್ಧಿಗೆ ಕಾಯ್ದಿರಿಸುವಂತೆ ಈ ಮೂಲಕ ಆಗ್ರಹಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮಾದಿಗ ದಂಡೋರ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ಕಾರ್ಯದರ್ಶಿ ಲೋಕೇಶ್ ಕ್ಯಾತನಹಳ್ಳಿ, ಗೌರವಾಧ್ಯಕ್ಷ ಎನ್.ಎಂ. ಶೇಖರಪ್ಪ, ಸಿದ್ದೇಶ್ ಇತರರು ಉಪಸ್ಥಿತರಿದ್ದರು.
