ಹಾಸನ, ಏ.4: ತಮ್ಮ ಜೀವನೋಪಾಯದ ಆಧಾರವಾಗಿರುವ ಕಲ್ಲು ಕ್ವಾರಿ ಪುನರ್ ಆರಂಭಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ, ಆಲೂರು ತಾಲ್ಲೂಕಿನ ಜಯಂತಿ ನಗರದ ನಿವಾಸಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಧರಣಿ ವೇಳೆ ಇಬ್ಬರು ಪ್ರತಿಭಟನಾಕಾರರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಜಯಂತಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದ ಹಲವು ಕುಟುಂಬಗಳು ಕೈಯಿಂದ ಕಲ್ಲು ಕಡಿಯುವ ಹಾಗೂ ಕಲ್ಲು ಕ್ವಾರಿಯ ಕೆಲಸದ ಮೇಲೆಯೇ ಜೀವನ ಸಾಗಿಸುತ್ತಿವೆ. ಆದರೆ, ಕಲ್ಲು ಕ್ವಾರಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಕೆಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ, ಜಿಲ್ಲಾಡಳಿತ ತಾತ್ಕಾಲಿಕವಾಗಿ ಕ್ವಾರಿಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿತ್ತು.
ಇದರಿಂದ ಕ್ವಾರಿ ಕಾರ್ಮಿಕರ ಜೀವನೋಪಾಯಕ್ಕೆ ಭಾರೀ ಹೊಡೆತ ಬಿದ್ದಿದ್ದು, ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾವು ಯಂತ್ರಗಳಿಂದಲ್ಲ, ಕೈಯಿಂದ ಕಲ್ಲು ಕೆಲಸ ಮಾಡುತ್ತಿದ್ದೇವೆ. ಇದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ. ಇದೇ ನಮ್ಮ ಬದುಕಿನ ಏಕೈಕ ಆಧಾರ,” ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಕ್ವಾರಿಯಿಂದ ಪರಿಸರ ಮತ್ತು ಸ್ಥಳೀಯರ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ ಎಂಬುದು ಕೆಲ ಸಂಘಟನೆಗಳ ಆರೋಪವಾಗಿದೆ. ಈ ಕುರಿತು ಆಡಳಿತ ಸಮಗ್ರ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಬೇಕೆಂಬ ಅಭಿಪ್ರಾಯವೂ ಕೇಳಿಬಂದಿದೆ.
ಧರಣಿ ನಡೆಯುತ್ತಿರುವ ಸ್ಥಳದಲ್ಲಿ ಮಳೆ, ಚಳಿ, ಬಿಸಿಲು ಎನ್ನದೆ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿರುವ ಕಾರಣ ಹಲವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಈಗಾಗಲೇ ಇಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೂ, “ಪ್ರಾಣ ಇಲ್ಲೇ ಹೋದರೂ ಸರಿ, ನಮಗೆ ನ್ಯಾಯ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ” ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
