ಹಾಸನ: ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದು ಮಾಡುವುದು, ಗುತ್ತಿಗೆ ಪದ್ಧತಿ ರದ್ದು ಸೇರಿ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜು.9 ರಂದು ಅಖಿಲ ಭಾರತ ಕಾರ್ಮಿಕರ ಮುಷ್ಕರ ಹಮ್ಮಿಕೊಳ್ಳಲಾಗಿದ್ದು ಅಂದು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚ್ ಕರೆಯ ಮೇರೆಗೆ ಜು.9 ರಂದು ಉತ್ಪಾದನೆ ಮತ್ತು ಸೇವೆಯನ್ನು ನಿಲ್ಲಿಸಿ ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಾವಿರಾರು ಕಾರ್ಮಿಕರು ಮೆರವಣಿಗೆ, ಪ್ರತಿಭಟನೆ, ರಸ್ತೆ ತಡೆ ನಡೆಸಿ ಸಾಮೂಹಿಕ ಬಂಧನಕ್ಕೊಳಗಾಗುವ ಮುಖಾಂತರ ಮುಷ್ಕರವನ್ನು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.
ಅಂಗನವಾಡಿ, ಬಿಸಿಯೂಟ, ಗ್ರಾ.ಪಂ., ಆಶಾ ಕಾರ್ಯಕರ್ತೆಯರಿಗೆ 31ಸಾವಿರ ರೂ. ವೇತನ ನೀಡಬೇಕು. ವಿದ್ಯುತ್ ಖಾಸಗೀಕರಣ ಕೈಬಿಟ್ಟು ಬಿಲ್ ವಾಪಸ್ ಪಡೆಯಬೇಕು. ಕಟ್ಟಡ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಮನರೇಗಾ ಮಾನವ ದಿನಗಳ 200ಕ್ಕೆ ಹೆಚ್ಚಿನ 600ರೂ. ಕೂಲಿ ನೀಡಬೇಕು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡುವುದು ಸೇರಿ ನಾನಾ ಬೇಡಿಕೆ ಈಡೇರಿಸಲು ಸರಕಾರಕ್ಕೆ ಆಗ್ರಹಿಸಲಾಗುವುದು ಎಂದರು.
8 ಗಂಟೆ ಕೆಲಸದ ಅವಧಿ, ಖಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು ಸಂಘ ಕಟ್ಟುವ ಹಕ್ಕು ಇನ್ನಿತರ ಹಕ್ಕುಗಳನ್ನು ಇಲ್ಲವಾಗಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ರದ್ದುಪಡಿಸಬೇಕು. ಇವತ್ತಿನ ಬೆಲೆಗಳಿಗೆ ಅನುಗುಣವಾಗಿ ಎಲ್ಲಾ ಸಂಘಟಿತ, ಅಸಂಘಟಿತ ಗುತ್ತಿಗೆ ಕಾರ್ಮಿಕರು ಮತ್ತು ನೌಕರರಿಗೂ ರಾಷ್ಟ್ರವ್ಯಾಪ್ತಿ 26 ಸಾವಿರ ಹಾಗೂ ರಾಜ್ಯವ್ಯಾಪ್ತಿ 36 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಗುತ್ತಿಗೆ, ಹೊರ ಗುತ್ತಿಗೆ, ನಿಗದಿತ ಅವಧಿಯ ಉದ್ಯೋಗ, ಅಪ್ರೆಂಟಿಸ್, ಟ್ರೈನಿ ನ್ಯಾಪ್ ಮುಂತಾದ ಹೆಸರಿನಲ್ಲಿ ಕಾರ್ಮಿಕರ ನೇಮಕ ನಿಲ್ಲಿಸಬೇಕು. ಗುತ್ತಿಗೆ, ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಎಂ.ಸಿ. ಡೋಂಗ್ರೆ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಎಸ್.ಎನ್. ಜಯಲಕ್ಷ್ಮಿ, ನಾಗರತ್ನ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
