ಹಾಸನ : ತಾಲೂಕಿನ ಶಾಂತಿಗ್ರಾಮ ಹೋಬಳಿ ಹೊಂಗೆರೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬುಧವಾರ ಸಂಜೆ ಆಕಸ್ಮಿಕ ಬೆಂಕಿ ಬಿದ್ದು ನಷ್ಟ ಸಂಭವಿಸಿದೆ.
ಬೆಂಕಿಯ ಉರಿಗೆ ಮಕ್ಕಳ ಆಟೋಪಕರಣ, ಆಹಾರ ಪದಾರ್ಥ, ಹಾಲಿನ ಪೌಡರ್, ಸೀಲಿಂಗ್ ಫ್ಯಾನ್, ಬೀರು ಹಾಗೂ ರಿಜಿಸ್ಟರ್ ಸೇರಿ ಕೆಲವು ಪುಸ್ತಕಗಳು ಸುಟ್ಟು ಹೋಗಿವೆ. ಅಂಗನವಾಡಿ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಏಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ದೌಡಾಯಿಸಿ ಪರಸ್ಪರ ಸಹಕಾರ ನೀಡುವ ಮೂಲಕ ನೀರು ಚೆಲ್ಲಿ ಬೆಂಕಿಯನ್ನು ನಂದಿಸುವ ಮೂಲಕ ಹಾನಿ ಹೆಚ್ಚಾಗುವುದನ್ನು ತಪ್ಪಿಸಿದ್ದಾರೆ.
ಮೊದಲೇ ಅಂಗನವಾಡಿ ಕಟ್ಟಡ ಶಿಥಿಲವಾಗಿದ್ದು, ಕಿಟಕಿ-ಬಾಗಿಲು ಹಳೆಯದಾಗಿದ್ದವು. ಇದರಿಂದ ಲಾಕ್ ಮಾಡಲು ಆಗುತ್ತಿರಲಿಲ್ಲ. ಪರಿಣಾಮ ಯಾರೋ ಕಿಡಿಗೇಡಿಗಳು ಹೊತ್ತಿಸಿದ ಕಿಡಿ ಕೊಠಡಿಯೊಳಕ್ಕೆ ವ್ಯಾಪಿಸಿ ಈ ಅನಾಹುತ ಸಂಭವಿಸಿದೆ.

ಅದೃಷ್ಟವಶಾತ್ ಅಂಗನವಾಡಿ ಸಮಯ ಮುಗಿದಿದ್ದರಿಂದ ಯಾವುದೇ ಮಕ್ಕಳು ಕೇಂದ್ರದಲ್ಲಿ ಇರದ ಕಾರಣ ಅನಾಹುತವೊಂದು ತಪ್ಪಿದಂತಾಗಿದೆ. ಇಲ್ಲಿ ಕಲಿಯುತ್ತಿರುವ ಒಟ್ಟು 18 ಮಕ್ಕಳು ಮನೆಗೆ ತೆರಳಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಈ ನಡುವೆ ಬೆಂಕಿ ಅನಾಹುತದಿಂದ ಸುಟ್ಟು ಹೋಗಿರುವ ಅಂಗನವಾಡಿ ಕೇಂದ್ರದ ಒಳಗೆ ಮದ್ಯದ ಬಾಟೆಲ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಸಂಬಂಧ ಅಂಗನವಾಡಿ ಟೀಚರ್ ನಿಮಿತಾ ಅವರು ನೀಡಿದ ದೂರು ಆಧರಿಸಿ ಶಾಂತಿಗ್ರಾಮ ಠಾಣೆ ಪಿಎಸ್ಐ ಅರುಣ್, ಶಾಂತಿಗ್ರಾಮ ಪಂಚಾಯ್ತಿ ಪಿಡಿಒ ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಂಗನವಾಡಿ ಕೇಂದ್ರವನ್ನು ಹೊಸದಾಗಿ ನಿರ್ಮಿಸಿಕೊಡುವಂತೆ ಸ್ಥಳೀಯರು ಹಾಗೂ ಮಕ್ಕಳ ಪೋಷಕರು ಮನವಿ ಮಾಡಿದರು.
