ಹೊಳೆನರಸೀಪುರ, ಜೂನ್ 27 – ಹಾಸನ ಜಿಲ್ಲೆಯಾದ್ಯಂತ ನಡೆಯುತ್ತಿರುವ ಭಾರಿ ಮಳೆಯಿಂದ ಹೇಮಾವತಿ ಜಲಾಶಯದಿಂದ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆಯಾಗುತ್ತಿದ್ದು, ನದಿ ಪಾತ್ರದ ಪ್ರದೇಶಗಳಲ್ಲಿ ಜನಜೀವನಕ್ಕೆ ಭೀತಿಯ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ ಪಟೇಲ್ ಅವರು ಇಂದು ಹೊಳೆನರಸೀಪುರ ಪಟ್ಟಣದ ನದಿಪಾತ್ರ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಿತಿಗತಿಯ ಅವಲೋಕನೆ ನಡೆಸಿದರು.
ನದಿ ತೀರದ ನಿವಾಸಿಗಳಿಗೆ ಎಚ್ಚರಿಕೆ ಹಾಗೂ ನೆರವಿನ ಆಶ್ವಾಸನೆ
ಅಕ್ಕಪಕ್ಕದಲ್ಲಿ ವಾಸವಾಗಿರುವ ಮೀನುಗಾರರು, ರೈತರು ಹಾಗೂ ನಿರಾಶ್ರಿತರಿಗೆ ಮುನ್ನೆಚ್ಚರಿಕೆ ಸೂಚನೆ ನೀಡಿ, ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸಬೇಕು ಎಂದು ತಾಸಿಲ್ದಾರ್ ವೈ. ಎಂ. ರೇಣು ಕುಮಾರ್ ಅವರಿಗೆ ಸಂಸದರು ಸೂಚಿಸಿದರು. ಈಗಾಗಲೇ ರಸ್ತೆಬದಿಯಲ್ಲಿ ಮೀನು ಮಾರಾಟ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಮೀನುಗಾರರನ್ನು ಎಪಿಎಂಸಿ ಮಾರುಕಟ್ಟೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಆ ಸ್ಥಳಕ್ಕೆ ಭೇಟಿ ನೀಡಿದ ಸಂಸದರು ಅವರುಗಳ ಯೋಗಕ್ಷೇಮ ವಿಚಾರಿಸಿ, ಜೋಪಾನವಾಗಿ ಮಕ್ಕಳನ್ನು ನೋಡಿಕೊಳ್ಳುವಂತೆ ಪೋಷಕರಿಗೆ ಮನವಿ ಮಾಡಿದರು.
ಇದನ್ನು ಓದಿ: ಆಲೂರು-ಆಲೂರು ತಾಲ್ಲೂಕು ಬೈರಾಪುರದಲ್ಲಿ ಸೆಂಟ್ರಿಂಗ್ ಕೆಲಸಗಾರನಿಗೆ ವಿದ್ಯುತ್ ಶಾಕ್: ದೇಹ ಅರ್ಧಭಾಗ ಭಾಗಶಃ ಸುಟ್ಟ ಗಾಯ
ಆಯತ್ ನಗರ ಸೇರಿದಂತೆ ತುರ್ತು ಪ್ರದೇಶಗಳಿಗೆ ಭೇಟಿ
ಅಯತ್ ನಗರ ಸೇರಿದಂತೆ ನದಿಯಿಂದ ನೀರು ಹರಿಯುವ ಮುನ್ಸೂಚನೆಯಿರುವ ಪ್ರದೇಶಗಳಿಗೆ ಸಂಸದರು ಭೇಟಿ ನೀಡಿ, ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಯು. ಎಂ. ಶಿವಶಂಕರ್ ಸೇರಿದಂತೆ ಹಲವಾರು ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
