ಹಾಸನ: “ಬ್ರೇನ್ ಟ್ಯೂಮರ್ ಮಾರಣಾಂತಿಕ ಅಲ್ಲ” – ಅತ್ಯಾಧುನಿಕ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆ ಸಜ್ಜು: ಡಾ. ಅನ್ಮೋಲ್
ಹಾಸನ, ನ.21 — “ಬ್ರೇನ್ ಟ್ಯೂಮರ್ (ಮೆದುಳು ಗೆಡ್ಡೆ) ಈಗ ಮಾರಣಾಂತಿಕ ರೋಗವಲ್ಲ ಎಂಬ ಮನೋಭಾವವನ್ನು ಸಮಾಜದಲ್ಲಿ ಬಲಪಡಿಸುವುದು ಅತ್ಯಂತ ಮುಖ್ಯ. ಇದಕ್ಕಾಗಿ ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆ ಅತ್ಯಾಧುನಿಕ ನರ–ಆಂಕೋಲಜಿ ಚಿಕಿತ್ಸೆ ನೀಡಲು ಸಿದ್ಧವಾಗಿದೆ” ಎಂದು ಸೀನಿಯರ್ ಕನ್ಸಲ್ಟೆಂಟ್ ನ್ಯೂರೋ ಹಾಗೂ ಸ್ಪೈನ್ ಸರ್ಜನ್ ಡಾ. ಅನ್ಮೋಲ್ ತಿಳಿಸಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಣಿಕ ರೋಗ ನಿರ್ಣಯ, ವೈಯಕ್ತಿಕಗೊಳಿಸಿದ ಚಿಕಿತ್ಸೆ, ಸ್ಟೀರಿಯೊಟ್ಯಾಕ್ಟಿಕ್ ರೇಡಿಯೋಸರ್ಜರಿ, ಲೇಸರ್ ಇಂಟರ್ಸ್ಟ್ರೀಷಿಯಲ್ ಥೆರಪಿ ಸೇರಿದಂತೆ ಎಲ್ಲಾ ರೀತಿಯ ಸಂಪೂರ್ಣ ನರ-ಆಂಕೋಲಜಿ ಆರೈಕೆ ಒಂದೇ ಸೂರಿನಡಿ ಲಭ್ಯವಿದೆ ಎಂದು ಹೇಳಿದರು. “ಇನ್ನೂ ವಿದೇಶಕ್ಕೆ ಹೋಗುವ ಅಗತ್ಯವಿಲ್ಲ. ಕರ್ನಾಟಕದಲ್ಲೇ ವಿಶ್ವದರ್ಜೆಯ ಚಿಕಿತ್ಸೆ ನಮ್ಮ ಗುರಿ,” ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ರೋಗಮುಕ್ತತೆಗೆ ಆರಂಭಿಕ ನಿರ್ಣಯವೇ ಕೀಲಿಕೈ
ಮೆದುಳುಗೆಡ್ಡೆಯ ಲಕ್ಷಣಗಳನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಜೀವ ಉಳಿಸುವ ಪ್ರಮುಖ ಹೆಜ್ಜೆ ಎಂದು ಡಾ. ಅನ್ಮೋಲ್ ಎಚ್ಚರಿಸಿದರು. ಮುಂಜಾನೆ ತೀವ್ರ ತಲೆನೋವು, ಕಾರಣವಿಲ್ಲದ ವಾಂತಿ, ದೃಷ್ಟಿ ಬದಲಾವಣೆ, ಅಸ್ವಸ್ಥತೆ, ನಡೆ-ನುಡಿಗಳ ವೈಪರಿತ್ಯ, ಅಸಮತೋಲನ, ಕೈ-ಕಾಲುಗಳಲ್ಲಿ ದೌರ್ಬಲ್ಯ ಮೊದಲಾದವು ಎಚ್ಚರಿಕೆಯ ಸಂಕೇತಗಳು ಎಂದು ತಿಳಿಸಿದರು.
“ಟಿಯರ್-2, ಟಿಯರ್-3 ನಗರಗಳಲ್ಲಿ ಬ್ರೇನ್ ಟ್ಯೂಮರ್ ಬಗ್ಗೆ ತಪ್ಪು ಕಲ್ಪನೆ ಮತ್ತು ತಡವಾದ ರೋಗನಿರ್ಣಯ ಮುಖ್ಯ ಅಡೆತಡೆ. ಇದನ್ನು ನಿವಾರಿಸಲು ನಮ್ಮ ಆಸ್ಪತ್ರೆ ಬದ್ಧವಾಗಿದೆ,” ಎಂದು ಹೇಳಿದರು.
ಇದನ್ನು ಓದಿ: ಹಾಸನ: ಶ್ರಮ ಶಕ್ತಿ ನೀತಿ–2025 ಗುಲಾಮಗಿರಿ ಹೇರಿಕೆ — ಸಿಐಟಿಯು ಆಕ್ರೋಶ
ಅತ್ಯಾಧುನಿಕ ಶಸ್ತ್ರಚಿಕಿತ್ಸಾ ತಂತ್ರಜ್ಞಾನ
ಮಣಿಪಾಲ್ ಆಸ್ಪತ್ರೆ ಯಶವಂತಪುರದಲ್ಲಿ ನ್ಯೂರೋ-ನ್ಯಾವಿಗೇಷನ್, ಇಂಟ್ರಾ ಆಪರೇಟಿವ್ ಅಲ್ಟ್ರಾಸೌಂಡ್, ನ್ಯೂರೋ ಮಾನಿಟರಿಂಗ್, ಹೈ-ಎಂಡ್ ಮೈಕ್ರೋಸ್ಕೋಪ್ಗಳು, ಎಂಡೋಸ್ಕೋಪ್ಗಳು, ಎಕ್ಕೋಸ್ಕೋಪ್ಗಳು ಸೇರಿದಂತೆ ಜೀವಿತಾವಧಿ ಉಳಿಸುವ ಅತ್ಯಾಧುನಿಕ ಉಪಕರಣಗಳು ಲಭ್ಯ.
ಈ ತಂತ್ರಜ್ಞಾನಗಳ ಬಳಕೆಯಿಂದ ಮೆದುಳಿನ ಅತಿ ಸೂಕ್ಷ್ಮ ಭಾಗಗಳಲ್ಲಿರುವ ಗೆಡ್ಡೆಗಳನ್ನು ಗರಿಷ್ಠ ನಿಖರತೆಯಿಂದ, ಕಡಿಮೆ ಅಪಾಯದೊಂದಿಗೆ ಶಸ್ತ್ರಚಿಕಿತ್ಸೆ ಮಾಡುವುದು ಸಾಧ್ಯವಾಗಿದೆ ಎಂದು ಡಾ. ಅನ್ಮೋಲ್ ಹೇಳಿದರು.
ಇಂದಿನ ವೈದ್ಯಕೀಯ ಸಾಧನೆಯೊಂದಿಗೆ ಅನೇಕ ಬ್ರೇನ್ ಟ್ಯೂಮರ್ಗಳನ್ನು ಸಂಪೂರ್ಣವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವುದು ಸಾಧ್ಯವಿದೆ ಎಂದು ಅವರು ಪುನರುಚ್ಚರಿಸಿದರು.
