ಹಾಸನ: ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನೇಕಾರ ಸಮುದಾಯದ ಜಾತಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಸೋಮಶೇಖರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿಗಣತಿ ವರದಿಯನ್ನು ನೇಕಾರ ಸಮುದಾಯವೋ ಸ್ವಾಗತಿಸುತ್ತದೆ. ಆದರೆ ನೇಕಾರರ ಜನಸಂಖ್ಯೆ ನಿಖರವಾಗಿ ದಾಖಲಿಸುವಲ್ಲಿ ಆಯೋಗವು ಕೈಗೊಂಡಿರುವ ಕ್ರಮ ಅವೈಜ್ಞಾನಿಕವಾಗಿದೆ. ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಅಂಕಿಅಂಶಗಳು ಸಮುದಾಯಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ. ಆದ್ದರಿಂದ ನೇಕಾರ ಸಮುದಾಯಗಳ ಮಠಾಧೀಶರು, ರಾಜಕೀಯ ಮುಖಂಡರು ಸಮಾಜದ ಗಣ್ಯರು ಸಭೆಗಳನ್ನು ನಡೆಸಿ ಒಕ್ಕೂಟದಿಂದ ಸಮಗ್ರ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಹಿಂದುಳಿದ ವರ್ಗಕ್ಕೆ ಸೇರಿದ ಅನೇಕ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಒಕ್ಕೂಟದ ಮೂಲಕ ಆಪ್ ಅನ್ನು ಸಿದ್ಧಪಡಿಸಲಾಗಿದೆ. ಈ ಆಪ್ ಮೂಲಕ ರಾಜ್ಯದಲ್ಲಿರುವ ನೇಕಾರರು ತಮ್ಮ ಕುಟುಂಬದ ಸದಸ್ಯರ ಮಾಹಿತಿಯನ್ನು ಒದಗಿಸಬಹುದು ಅಲ್ಲದೆ ನಿಖರ ಮಾಹಿತಿಯನ್ನು ದಾಖಲಿಸಲು 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯದ ಜಾತಿಗಣತಿ ಸಮೀಕ್ಷೆಯನ್ನು ಸ್ಥಳೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೂಲಕ ಆಯಾ ಕುಟುಂಬಗಳನ್ನು ಭೇಟಿ ಮಾಡಿ ಅಂಕಿ ಅಂಶವನ್ನು ದಾಖಲಿಸಲಾಗುವುದು ಎಂದರು.
ಈಗಾಗಲೇ ರಾಜ್ಯದಲ್ಲಿ ಸಮೀಕ್ಷೆ ಪ್ರಾರಂಭವಾಗಿದ್ದು ಈ ಮೂಲಕ ನೇಕಾರ ಸಮುದಾಯದ ನಿಖರ ಜನಸಂಖ್ಯೆ ಮಾಹಿತಿ ದೊರಕಲಿದೆ. ನಂತರ ಈ ವರದಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ಸರ್ಕಾರದ ಸಮೀಕ್ಷಾ ವರದಿ ಅಂಕಿ ಅಂಶವನ್ನು ಸಹ ಪರಾಮರ್ಶೆ ಮಾಡಿ ಅಂತಿಮವಾಗಿ ರಾಜ್ಯದ ನೇಕಾರರ ಜನಸಂಖ್ಯೆಯನ್ನು ಕ್ರೋಢೀಕರಿಸಬಹುದಾಗಿದೆ ಎಂದು ಹೇಳಿದರು.
ನಮ್ಮ ಒಕ್ಕೂಟದಿಂದ ಹಮ್ಮಿಕೊಂಡಿರುವ ಜಾತಿ ಸಮೀಕ್ಷೆಯಲ್ಲಿ ಸಮುದಾಯದ ಕುಟುಂಬ ಸದಸ್ಯರೆಲ್ಲ ಕೈಜೋಡಿಸಿ ನಿಖರ ಮಾಹಿತಿಯನ್ನು ಒದಗಿಸುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪದಾಧಿಕಾರಿಗಳಾದ ಶಿವಪ್ಪ ಶೆಟ್ಟಿ, ಪುಟ್ಟರಾಮಶೆಟ್ಟಿ ಮಂಜುಳಾ, ಪ್ರೇಮಮ್ಮ,ಶಂಕರ ಶೆಟ್ಟಿ, ಜಗದೀಶ್ ಇದ್ದರು.
