ಹಾಸನ: ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ ಮೊದಲ ಬಾರಿಗೆ ಮಹಾಪೌರ ಎಂ.ಚಂದ್ರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಆರಂಭದಲ್ಲಿ ಜೆಡಿಎಸ್ ಸದಸ್ಯ ಯೋಗೇಂದ್ರ ಬಾಬು ಮಾತನಾಡಿ, ನಾನು ಪ್ರತಿ ಸಭೆಯಲ್ಲೂ ಎಂಸಿಇ ಕಾಲೇಜಿನವರು ಎಷ್ಟು ಆಸ್ತಿ ಒತ್ತುವರಿ ಮಾಡಿದ್ದಾರೆ, ಎಷ್ಟು ಕಂದಾಯ ಕಟ್ಟುತ್ತಿದ್ದಾರೆ ಎಂದು ಕೇಳಿದರೆ ಮಾಹಿತಿ ನೀಡುತ್ತಿಲ್ಲ, ಅಧಿಕಾರಿಗಳೂ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತ ಕೃಷ್ಣಮೂರ್ತಿ ಒಂದು ವಾರದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಮೋಹನ್ ಮಾತನಾಡಿ, ಹೊಸ ಬಸ್ ನಿಲ್ದಾಣದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಶಾಸಕರು ಮುಂದಾಗಿರುವುದು ಸಂತೋಷ, ಆದರೆ ಹಾಲಿ ಅಲ್ಲಿ ಫುಟ್ಪಾತ್ ಮೇಲೆ ವಿವಿಧ ಅಂಗಡಿ ಇರುವುದರಿಂದ ಪಾದ ಚಾರಿಗಳಿಗೆ ತೊಂದರೆಯಾಗುತ್ತಿದೆ, ಮೊದಲು ಅವುಗಳನ್ನು ತೆರವುಗೊಳಿಸಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ವೈಯಕ್ತಿಕ ವಿಚಾರಗಳನ್ನ ಇಲ್ಲಿ ತರಬೇಡಿ, ಫುಟ್ ಪಾತ್ ಮೇಲೆ ಜನಸಾಮಾನ್ಯರು ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಾರೆ. ಹಾಗಾದರೆ ಸಹ್ಯಾದ್ರಿ ವೃತ್ತ ಮತ್ತು ಎಂ.ಜಿ.ರಸ್ತೆಯಲ್ಲಿ ಫುಟ್ಬಾತ್ ಮೇಲೆ ಫುಡ್ ಕೋರ್ಟ್ ಆಗಿದೆ, ಅದನ್ನು ತೆರವುಗೊಳಿಸಲಾಗುತ್ತಾ ಎಂದು ಕೇಳಿದರು.
ಮುಂದುವರಿದು 25ನೇ ವಾರ್ಡ್ ಸದಸ್ಯರು ನಗರಸಭೆ ಅಂಗಡಿಯನ್ನ ವಾರ್ಡ್ ಕಚೇರಿಯನ್ನಾಗಿ ಮಾಡಿಕೊಳ್ಳುತೇವೆ ಎಂದು ಅನುಮತಿ ಪಡೆದು ಅಂಗಡಿ ಇಟ್ಟುಕೊಂಡಿದ್ದಾರೆ, ಎಲ್ಲಾ ಸದಸ್ಯರಿಗೂ ಅವರ ವಾರ್ಡ್ ಅಂಗಡಿ ತೆರೆಯಲು ಕಟ್ಟಡ ನೀಡಿ ಎಂಬ ಶಾಸಕರ ಮಾತಿಗೆ, ಶೀಘ್ರದಲ್ಲೇ ತೆರಗೊಳಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

ಸದಸ್ಯೆ ಸುಜಾತ ರಮೇಶ್ ಮಾತನಾಡಿ, ಹುಣಸಿಕೆರೆ ಬಡಾವಣೆಯಲ್ಲಿ ಹಕ್ಕುಪತ್ರ ವಿತರಿಸಲಾಗಿದೆ, ಆದರೆ ಇ-ಖಾತೆ ಮಾಡಿಕೊಡುತ್ತಿಲ್ಲ, ಕೇವಲ ಒಂದು ಖಾಸಗಿ ಶಾಲೆಗೆ ಖಾತೆ ಮಾಡಿಕೊಡಲಾಗಿದೆ, ಉಳಿದವರಿಗೇಕೆ ಮಾಡಿಕೊಡುತ್ತಿಲ್ಲ. ನಿವಾಸಿಗಳು ನಿತ್ಯ ಮನವಿ ಸಲ್ಲಿಸುತ್ತಿದ್ದು, ಕೂಡಲೇ ಎಲ್ಲರಿಗೂ ಖಾತೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಆಯುಕ್ತರು ಇ-ಖಾತೆ ಮಾಡಲು ಬರುವುದಿಲ್ಲ ಈಗಾಗಲೇ ಪ್ರಕರಣ ಲೋಕಾಯುಕ್ತದಲ್ಲಿದೆ. ಕಾನೂನು ರೀತಿ ಏನು ಮಾಡಬೇಕು ಅದನ್ನ ಮಾಡುತ್ತೇವೆ, ಖಾಸಗಿ ಶಾಲೆಗೆ ಖಾತೆ ಮಾಡಿದ್ದರೆ ವಾಪಸ್ ಪಡೆದುಕೊಳ್ಳುವುದಾಗಿ ತಿಳಿಸಿದರು.
ನಗರದಲ್ಲಿ ಅನಧಿಕೃತ ಪ್ಲೆಕ್ಸ್ ಮತ್ತು ಬ್ಯಾನರ್ಗಳನ್ನ ಶೀಘ್ರ ತೆರಗೊಳಿಸಲಾಗುವುದು, ಟೆಂಡರ್ ಪ್ರಕ್ರಿಯೆ ಸಂಬಂಧ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ತಿಳಿಸಿದರು.
ನಗರದಲ್ಲಿ ಅನಧಿಕೃತ ಪ್ಲೆಕ್ಸ್ ಮತ್ತು ಬ್ಯಾನರ್ ಹಾಗೂ ಜಾಹೀರಾತು ಫಲಕ ಹಾಕಲಾಗುತ್ತಿದೆ. ಆದರೂ ಯಾವುದೇ ಕ್ರಮ ಆಗಿಲ್ಲ, ಜಾಹೀರಾತು ಹಾಕಲು ಹಿಂದಿನ ಆಯುಕ್ತರು 15 ವರ್ಷಕ್ಕೆ ಟೆಂಡರ್ ನೀಡಿದ್ದಾರೆ, ಅದನ್ನು ರದ್ದುಪಡಿಸಿ ಬೇರೆ ಟೆಂಡರ್ ಕರೆಯಬೇಕು, ಕೇವಲ 11 ತಿಂಗಳಿಗೆ ಅವಕಾಶ ಮಾಡಿಕೊಡಿ ಎಂದು ಸದಸ್ಯ ಗಿರೀಶ್ ಚನ್ನವೀರಪ್ಪ ಅವರ ಪ್ರಶ್ನೆಗೆ ಉತ್ತರಿಸಿದರು.
ಮುಸ್ಲಿಂ ಸದಸ್ಯರ ಪ್ರತಿಭಟನೆ: ಸಾಮಾನ್ಯ ಸಭೆಗೂ ಮುನ್ನ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿದ್ದು, ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಪಾಲಿಕೆ ಮುಸ್ಲಿಂ ಸದಸ್ಯರು ಪ್ರತಿಭಟನೆ ನಡೆಸಿದರು.
ಅನೇಕ ವಿಷಯದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ ಸದಸ್ಯರು. ಎಲ್ಲರನ್ನೂ ಸಮನಾಗಿ ಕಾಣಬೇಕು ಎಂದರು. ಇದೇ ವೇಳೆ ನಮಗೂ ಅನ್ಯಾಯವಾಗುತ್ತಿದೆ ಎಂದು ಬಿಜೆಪಿ ಸದಸ್ಯರು ದನಿಗೂಡಿದರು. ಇದಕ್ಕೆ ಸಭೆಯಲ್ಲಿ ಉತ್ತರಿಸಿದ ಚಂದ್ರೇಗೌಡ, ಯಾರೂ ಜಾತಿ, ಧರ್ಮ ತರಬೇಡಿ, ಎಲ್ಲಾ ಸದಸ್ಯರನ್ನ ಸಮನಾಗಿ ಕಾಣಲಾಗುತ್ತಿದೆ, ಯಾವುದೇ ತಾರತಮ್ಯ ಮಾಡುತ್ತಿಲ್ಲ. ಒಂದು ವೇಳೆ ಆಗಿದ್ದರೆ ಸರಿಪಡಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಉಪ ಮೇಯರ್ ಹೇಮಲತಾ ಕಮಲ್ ಕುಮಾರ್ ಮೊದಲಾದವರಿದ್ದರು.
