ಹಾಸನ: “ಎದೆಯಹಣತೆ” ಕೃತಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಜಯಿಸಿ ಕನ್ನಡದ ಹೆಮ್ಮೆಯನ್ನೇ ಹೆಚ್ಚಿಸಿದ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹಾಸನದಲ್ಲಿ ಭರ್ಜರಿ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಿತು. ಕಲಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ, ಸಾಹಿತಿಗಳು, ಜನಪ್ರತಿನಿಧಿಗಳು, ಜಿಲ್ಲಾ ಅಧಿಕಾರಿಗಳು ಭಾಗವಹಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು, “ಹಾಸನ ಜಿಲ್ಲೆ ಎರಡು ದೊಡ್ಡ ಕೊಡುಗೆಗಳನ್ನು ನಾಡಿಗೆ ನೀಡಿದೆ. ಮೊದಲ ಶಿಲಾಶಾಸನ ಇಟ್ಟಿದ್ದು ಕೂಡ ಹಾಸನ, ಈಗ ಬೂಕರ್ ಪ್ರಶಸ್ತಿಗೆ ಪಾತ್ರವಾದ ಕೃತಿ ಕೂಡ ಹಾಸನದ ಭೂಮಿಯಲ್ಲಿ ಹುಟ್ಟಿದ್ದು. ಇದು ಕನ್ನಡಕ್ಕೆ ಸಿಕ್ಕ ತಲೆಮೇಲಿನ ಗೌರವ” ಎಂದರು.
ಬಾನುಮೆಡಂ ಅವರ ಕೃತಿ ಬಂಡಾಯ ಚಳವಳಿಯಿಂದ ಹುಟ್ಟಿದ ದನಿಯಾಗಿದೆ. ಅವರ ಜೀವನದ ಕಷ್ಟ-ಸಾಧನೆಗಳು ಕಥೆಗೂ ಮೀರಿ ಮಾತನಾಡುತ್ತವೆ. “ಬಾನು ಕೃತಿಯನ್ನು ಬರೆಯದೇ ಇದ್ದಿದ್ದರೆ ಅದು ಅನುವಾದವಾಗುತ್ತಿರಲಿಲ್ಲ, ದೀಪಾ ಭಾಸ್ತಿಯವರು ಅನುವಾದಿಸದೆ ಇದ್ದಿದ್ದರೆ ಬೂಕರ್ ಬಂದಿರಲಿಲ್ಲ” ಎಂದು ಅವರು ಖುಷಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಎಚ್.ಎಸ್. ಅನುಪಮಾ, “ಈ ಕೃತಿ ಕೇವಲ ಸಾಹಿತ್ಯ ಕೃತಿಯಾಗಿಲ್ಲ, ಒಬ್ಬ ಹೋರಾಟಗಾರ್ತಿ, ಶೋಷಿತ ಸಮುದಾಯದ ಮಹಿಳೆಯೊಬ್ಬಳ ಧೈರ್ಯವಂತಿಕೆಯ ಪಟಪಟಿಕೆ” ಎಂದರು.
ಈ ಸಂದರ್ಭದಲ್ಲಿ ಮಹಾಪೌರ ಎಂ. ಚಂದ್ರೇಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಮೊಹಮ್ಮದ್ ಸುಜೀತಾ, ಜಿಪಂ ಸಿಇಒ ಪೂರ್ಣಿಮ ಅವರು ಮಾತನಾಡಿ, ಬಾನುಮೆಡಂ ಅವರ ಸಾಧನೆ ಕನ್ನಡದ ಹೆಮ್ಮೆ ಎಂದು ಪ್ರಶಂಸೆ ಸಲ್ಲಿಸಿದರು.

ಸಂಸದ ಶ್ರೇಯಸ್ ಪಟೇಲ್ ಅವರು, “ನಾನು ಸಂಸದರಾಗಿರುವ ಕಾಲದಲ್ಲಿ ನನ್ನ ತಾಯಿ ಸಮಾನ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿರುವುದು ನನಗೆ ಗೌರವದ ವಿಷಯ” ಎಂದು ಅಭಿಮಾನ ವ್ಯಕ್ತಪಡಿಸಿದರು.
ಶಾಸಕ ಸ್ವರೂಪ್ ಪ್ರಕಾಶ್ ಅವರು, “ಎಸ್.ಕೆ. ಕರೀಂಖಾನ್ ನಂತರ ಹಾಸನ ಜಿಲ್ಲೆಗೆ ಬಾನುಮೆಡಂ ಇಷ್ಟು ದೊಡ್ಡ ಮಟ್ಟದ ಗೌರವ ತಂದಿದ್ದಾರೆ. ಅವರ ಸಾಧನೆ ನಮಗೆ ಸ್ಫೂರ್ತಿ” ಎಂದು ಹೇಳಿದರು.
ಡಿಸಿ ಕಚೇರಿ ಮುಂಭಾಗದಿಂದ ಕಲಾಭವನದವರೆಗೆ ಬಣ್ಣದ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಾಗರಿಕ ಸಮಿತಿಯ ಧರ್ಮೇಶ್ ನೇತೃತ್ವದಲ್ಲಿ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿತ್ತು.
ಬಾನುಮೆಡಂ ಕೃತಿಯ ಯಶಸ್ಸು ಕನ್ನಡ ಸಾಹಿತ್ಯಕ್ಕೂ, ಜನ ಚಳವಳಿಗೂ, ಮಹಿಳಾ ಶಕ್ತಿಗೂ ಒಂದು ಬಲವಾದ ಸಂದೇಶ ಕಳಿಸಿದೆ. ಹಾಸನ ಜಿಲ್ಲೆಯಿಂದ ಹರಡಿದ ಈ ಕಾವ್ಯದ ಶಕ್ತಿ ಇಡೀ ಜಗತ್ತಿಗೆ ಕನ್ನಡದ ಸಂತೆಯ ಹೆಜ್ಜೆಗುರುತು ಹಾಕಿದೆ.
