ಹಾಸನ: ನಗರದ ಹೊರವಲಯದಲ್ಲಿರುವ ಉದ್ದೂರು ಕೆರೆಯಲ್ಲಿ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ನಗರದ ಅಡ್ಲಿ ಮನೆ ನಿವಾಸಿ ಪ್ರಜ್ವಲ್ (18) ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಈತ ನಗರದ ಸೆಂಟ್ರಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಇಂದು ಪ್ರಜ್ವಲ್ ತನ್ನ ನಾಲ್ವರು ಸ್ನೇಹಿತರೊಂದಿಗೆ ರಿಂಗ್ ರಸ್ತೆ ಸಮೀಪದ ಡಾಲರ್ಸ್ ರೆಸಿಡೆನ್ಸಿ ಲೇಔಟ್ ಹಿಂಭಾಗದ ಉದ್ದೂರು ಕೆರೆಗೆ ಈಜಲು ತೆರಳಿದ್ದನು.
ಐವರು ಸ್ನೇಹಿತರ ಪೈಕಿ ಇಬ್ಬರು ನೀರಿಗೆ ಇಳಿದಿದ್ದು, ಈ ವೇಳೆ ಈಜುತ್ತಿದ್ದ ಪ್ರಜ್ವಲ್ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಪ್ರಜ್ವಲ್ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಶೋಕ ಮುಗಿಲು ಮುಟ್ಟಿದ್ದು, ವಿಶೇಷವಾಗಿ ಅಜ್ಜಿಯ ಆಕ್ರಂದನ ಸ್ಥಳದಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. ಈ ದುರ್ಘಟನೆಗೆ ಸಂಬಂಧಿಸಿದಂತೆ ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
