ಹಾಸನ – ತಾಲ್ಲೂಕಿನ ಗೇಕರಹಳ್ಳಿ ಗ್ರಾಮದಲ್ಲಿ ಇಂದು ಶ್ರೀಮತಿ ಚೆನ್ನಮ್ಮ, ಶ್ರೀ ಹೆಚ್.ಡಿ ದೇವೇಗೌಡರ ಸಮುದಾಯ ಭವನವನ್ನು ಶಾಸಕ ಸ್ವರೂಪ್ ಪ್ರಕಾಶ್ ಅವರು ಭವ್ಯವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಉತ್ಸಾಹದಿಂದ ಬರಮಾಡಿಕೊಂಡರು.
ಉದ್ಘಾಟನೆಗೂ ಮುನ್ನ ಶಾಸಕರು ಗ್ರಾಮದ ಹುಚ್ಚಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, “ಗ್ರಾಮಸ್ಥರ ಬಹುದಿನಗಳ ಕನಸಾಗಿದ್ದ ಸಮುದಾಯ ಭವನ ಇಂದು ಉದ್ಘಾಟನೆಗೊಂಡಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನನ್ನ ಅವಧಿಯಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.
ಲೇಔಟ್ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಇನ್ನೂ ಪರ್ಯಾಯ ನಿವೇಶನ ಸಿಗದ ವಿಷಯವನ್ನು ಶಾಸಕರ ಗಮನಕ್ಕೆ ತರಲಾಗಿದ್ದು, ಈ ಕುರಿತು ಮುಂದಿನ ವಾರ ಹೂಡಾ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸ್ವಾಮಿ ಗೌಡ ಮಾತನಾಡಿ, “ಮಾಜಿ ಶಾಸಕ ಪ್ರಕಾಶ್ ಅವರ ಅವಧಿಯಲ್ಲೇ ಈ ಕಟ್ಟಡಕ್ಕೆ ಗುದ್ದಲಿ ಪೂಜೆ ನಡೆದಿತ್ತು. ಆದರೆ ಮೂವತ್ತು ವರ್ಷಗಳಿಂದ ಉದ್ಘಾಟನೆ ಆಗದೆ ಬಾಕಿ ಉಳಿದಿತ್ತು. ಇಂದು ಎಲ್ಲ ಸೌಲಭ್ಯಗಳೊಂದಿಗೆ ಕಟ್ಟಡ ಸಜ್ಜಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು, ಗ್ರಾಮಸ್ಥರು ಹಾಗೂ ವಿವಿಧ ಹಳ್ಳಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
