ಹಾಸನ- ಅರಸೀಕೆರೆಯಲ್ಲಿ ನಡೆದ ಪೌರ ಕಾರ್ಮಿಕರ ಮೇಲಿನ ಹಲ್ಲೆ ಖಂಡಿಸಿ ಡಿಸಿ ಕಚೇರಿ ಎದುರು ಪೌರ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿದರು.
ಈ ವೇಳೆ ಪೌರ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಅರಸೀಕೆರೆ ನಗರಸಭೆಯ 23ನೇ ವಾರ್ಡಿನ ಮುಜಾವರ್ ಮೊಹಲ್ಲಾದಲ್ಲಿ ಸೇವಾ ನಿರತ ಮಹಿಳಾ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿರುವುದು ಘೋರ ಅಪರಾಧವಾಗಿದೆ ಎಂದರು.
ಮಹಿಳಾ ಪೌರಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೂ ಅಲ್ಲದೆ ಹಿಂದು, ಮುಂದು ನೋಡದೆ ಹಲ್ಲೆಯನ್ನು ಮಾಡಿದ್ದು, 5 ಜನ ಪೌರ ಕಾರ್ಮಿಕರಿಗೆ ಗಾಯಗಳಾಗುವವರೆಗೆ ಹಲ್ಲೆ ಮಾಡಿದ್ದಾರೆ. ಇವರನ್ನು ಪೌರಾಯುಕ್ತರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಿರುತ್ತಾರೆ ಎಂದು ವಿವರಿಸಿದರು.
ಈ ಘಟನೆಯನ್ನು ಕರ್ನಾಟಕ ರಾಜ್ಯ ಪೌರ ನೌಕರರುಗಳ ಸಂಘಟನೆಯು ಉಗ್ರವಾಗಿ ಖಂಡಿಸುತ್ತದೆ. ಮತ್ತು ಈ ಕೂಡಲೇ ಇವರುಗಳ ಮೇಲೆ ಎಫ್ಐಆರ್ ದಾಖಲಿಸಿ ಗಡಿಪಾರು ಮಾಡುವುದರ ಮೂಲಕ ಇನ್ನು ಮುಂದೆ ರಾಜ್ಯ ಪೌರ ಕಾರ್ಮಿಕರಿಗೆ ಮತ್ತು ಇತರೆ ಪೌರ ನೌಕರರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದರು.
ಪೌರ ಕಾರ್ಮಿಕರನ್ನು ಇತ್ತೀಚಿನ ದಿನಗಳಲ್ಲಿ ಕಡೆಗಣಿಸಲಾಗುತ್ತಿದೆ, ಅಲ್ಲದೆ ದೌರ್ಜನ್ಯ ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ ಜಿಲ್ಲಾಡಳಿತ ಹಾಗೂ ಸರ್ಕಾರ ಪೌರ ಕಾರ್ಮಿಕರಿಗೆ ಭದ್ರತೆ ಒದಗಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಮನವಿ ಮಾಡಿದರು.
ಇಡೀ ನಗರವನ್ನು ಸ್ವಚ್ಛ ಮಾಡುವ ಪೌರ ಕಾರ್ಮಿಕರಿಗೆ ಭದ್ರತೆ ಇಲ್ಲವಾದರೆ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಪೌರ ಕಾರ್ಮಿಕರ ರಕ್ಷಣೆಗೆ ಆಳುವ ಸರ್ಕಾರಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಯೋಗೀಶ್, ಶಾಖ ಉಪಾಧ್ಯಕ್ಷ ರಮೇಶ್, ಸಂಘಟನೆ ಮುಖಂಡರಾದ ಶಂಕರ್ರಾಜು, ನಾಗರಾಜ್ ಹೆತ್ತೂರು, ಪೃಥ್ವಿ, ವೆಂಕಟೇಶ್ ಬ್ಯಾಕರವಳ್ಳಿ, ಸಂಘದ ಪರಶುರಾಮ್, ಲೋಕೇಶ್, ಜ್ಯೋತಿ, ಮನು, ದುರ್ಗಪ್ರಸಾದ್, ಆರೋಗ್ಯ ನಿರೀಕ್ಷಕರಾದ ಚೇತನ್ ಕುಮಾರ್, ಪ್ರಸಾದ್, ಆದೀಶ್ ಸೇರಿದಂತೆ ಪೌರಕಾರ್ಮಿಕ ಮಹಿಳೆಯರು ಇದ್ದರು.
