ಹಾಸನ: ನೂತನ ಜಿಲ್ಲಾಧಿಕಾರಿ ಕಚೇರಿ (ಜಿಲ್ಲಾ ಭವನ) ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯನ್ನು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿ ಕಾಮಗಾರಿಯ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಿಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಮೂಲ ಆದೇಶದ ಪ್ರಕಾರ ಕಟ್ಟಡ ನಿರ್ಮಾಣಕ್ಕೆ ರೂ. 10 ಕೋಟಿ ಮಾತ್ರ ಮಂಜೂರಾಗಿದ್ದು, ಜಿ+1 ಕಟ್ಟಡಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈಗ ಕಾಮಗಾರಿಯ ವೆಚ್ಚ ರೂ. 55 ಕೋಟಿಗೆ ಏರಿಕೆಯಾಗಿರುವುದರ ಜೊತೆಗೆ ಕ್ಯಾಬಿನೆಟ್ ಅನುಮತಿ ಇಲ್ಲದೆ ಕಟ್ಟಡವನ್ನು ಜಿ+2 ಮಟ್ಟಕ್ಕೆ ಹೆಚ್ಚಿಸಿರುವುದು ಗಮನಕ್ಕೆ ಬಂದಿದೆ ಎಂದು ಸಚಿವರು ಹೇಳಿದರು. ಮೂಲ ಆದೇಶದಲ್ಲಿ ಮೊದಲ ಹಂತ, ಎರಡನೇ ಹಂತದ ಕಾಮಗಾರಿ ಕುರಿತು ಯಾವುದೇ ಉಲ್ಲೇಖ ಇಲ್ಲದಿದ್ದರೂ, ಈಗ ಹಂತ ಹಂತವಾಗಿ ಕಾಮಗಾರಿ ನಡೆಸಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡದ ಮೂಲ ಯೋಜನೆಯಲ್ಲಿ 110 ಪಿಲ್ಲರ್ಗಳನ್ನು ಮಾತ್ರ ಪ್ರಸ್ತಾಪಿಸಲಾಗಿತ್ತು. ಆದರೆ ಪ್ರಸ್ತುತ 220 ಪಿಲ್ಲರ್ಗಳನ್ನು ನಿರ್ಮಿಸಿರುವುದರಿಂದ ಇದಕ್ಕೆ ಕಾರಣವೇನು ಎಂಬುದೇ ಸ್ಪಷ್ಟವಾಗಿಲ್ಲ ಎಂದು ಸಚಿವರು ಪ್ರಶ್ನಿಸಿದರು. ಎರಡನೇ ಹಂತದ ಕಾಮಗಾರಿಗೆ ಈಗಾಗಲೇ ರೂ. 20 ಕೋಟಿ ವೆಚ್ಚವಾಗಿದ್ದು, ಪ್ರಸ್ತುತ ನಡೆದಿರುವ ಕೆಲಸಕ್ಕೆ ರೂ. 6.97 ಕೋಟಿ ಬಿಲ್ ಪಾವತಿಸಬೇಕಿದೆ. ಅಲ್ಲದೆ ಹೆಚ್ಚುವರಿ ರೂ. 18 ಕೋಟಿ ಅನುದಾನವನ್ನು ಕಂದಾಯ ಇಲಾಖೆಯಿಂದ ಕೇಳಲಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ವಾರ ತಾಂತ್ರಿಕ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಇನ್ನಷ್ಟು ಎಷ್ಟು ಹಣ ಅಗತ್ಯವಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಸಚಿವರು ಸೂಚಿಸಿದರು. ವರದಿ ಆಧರಿಸಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು. ಕಟ್ಟಡ ಕಾಮಗಾರಿಗೆ ವೇಗ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ವಲಯ ಆಯುಕ್ತ ಆದಿತ್ಯ ಆಮ್ಲಾನ್ ಬಿಶ್ವಾಸ್, ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ, ಮುಖ್ಯ ಇಂಜಿನಿಯರ್ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.
ನೂತನ ಜಿಲ್ಲಾ ಭವನ ಕಾಮಗಾರಿಯ ಬಗ್ಗೆ ತಾಂತ್ರಿಕ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.
