ಹಾಸನ: ಮಂಗಳವಾರ ಬೆಳ್ಳಂ ಬೆಳಿಗ್ಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ನಗರ ಪ್ರದಕ್ಷಿಣೆ ಮಾಡಿದರು. ಈ ವೇಳೆ ಕೂಲಿ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ಪಡೆಯಲು ಸಲಹೆ, ಸಾಲಗಾಮೆ ರಸ್ತೆ ಎರಡು ಬದಿ ನಡೆಯುವ ಸಂತೆ ವ್ಯಾಪಾರ ಸ್ಥಳ ಬದಲಾವಣೆಗೆ ಚಿಂತನೆ, ಜಿಲ್ಲಾ ಕ್ರೀಡಾಂಗಣದ ಪರಿಶೀಲನೆ ಮಾಡಿ ಹಲವು ಸಲಹೆ ಸೂಚನೆ ನೀಡಿದರು.
ಅಧಿಕಾರ ಸ್ವೀಕರಿಸಿದ ತರುವಾಯ ಆಗಾಗ್ಗೆ ನಗರ ಮತ್ತು ಸುತ್ತ ಮುತ್ತ ರೌಂಡ್ಸ್ ಮಾಡಿ ಇಲ್ಲಿನ ಜನರಿಗೆ ಅನುಕೂಲವಾಗುವ ಹಾಗೂ ಸಮಸ್ಯೆ ಇದ್ದರೆ ಸರಿಪಡಿಸಲು ಪರಿಶೀಲನೆ ನಡೆಸುತ್ತಲೆ ಇರುವ ಡಿಸಿ ಅವರು, ಮಂಗಳವಾರ ಸಹ, ತಮ್ಮ ಮನೆಯಿಂದ ಬೆಳಿಗ್ಗೆ ಹೊರಟು, ಎನ್.ಆರ್. ವೃತ್ತಕ್ಕೆ ಆಗಮಿಸಿದರು. ಅಲ್ಲಿ ಕೆಲಸಕ್ಕೆಂದು ಕೂಲಿ ಕಾರ್ಮಿಕರು ಗುಂಪು ಸೇರಿದ್ದನ್ನು ಗಮನಿಸಿ ವಿಚಾರಿಸಿದರು.
ಇವರಿಗೆ ಇದುವರೆಗೂ ಕೂಲಿ ಕಾರ್ಮಿಕರ ಸೌಲಭ್ಯ ಸಿಗದ ಇರುವ ಬಗ್ಗೆ ಚರ್ಚಿಸಿದರು. ಎಲ್ಲರು ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆ ತಂದುಕೊಟ್ಟರೆ ಶೀಘ್ರದಲ್ಲಿಯೇ ಕಾರ್ಮಿಕರ ಕಾರ್ಡ್ ಕೊಡುವ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಪಕ್ಕದಲ್ಲಿ ಬೀದಿ ಬದಿ ತಳ್ಳುವ ತಿಂಡಿ ಗಾಡಿಯಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವನೆ ಮಾಡುತ್ತಿರುವ ಸ್ಥಳಕ್ಕೆ ಬಂದು, ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಜಾಗರೂಕತೆಯಿಂದ ಇರಲು ಸೂಚಿಸಿದರು.
ನಂತರ ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರದ ಮೂಲಕ ಒಳ ಪ್ರವೇಶ ಮಾಡಿ ಅಲ್ಲೇ ಇದ್ದ ಖಾಲಿ ಜಾಗದ ಬಗ್ಗೆ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಮತ್ತು ತಹಸೀಲ್ದಾರ್ ಗೀತಾ ಸಲಹೆ ನೀಡಿದರು. ಕೊರೊನಾ ಸಮಯದಲ್ಲಿ ಕೆಲ ತಿಂಗಳ ಕಾಲ ಸಂತೆ ನಡೆಯಲು ಅವಕಾಶ ನೀಡಿದ ಬಗ್ಗೆ ಮಾಹಿತಿ ನೀಡಿದರು. ಆದರೆ ಕ್ರೀಡಾಂಗಣದ ಕೋಚರ್ ಹಾಗೂ ಆಟಗಾರರು ಇದಕ್ಕೆ ಆಕ್ಷೇಪಣೆ ಮಾಡಿದರು. ಇದು ಕ್ರೀಡಾಂಗಣವಾಗಿದ್ದು, ಸಂತೆ ನಡೆಯುವುದರಿಂದ ಸಮಸ್ಯೆ ಆಗುತ್ತದೆ. ದಯಮಾಡಿ ಬೇರೆ ಕಡೆ ಮಾಡಿದರೆ ಒಳಿತು ಎಂದು ಅರಿಕೆ ಮಾಡಿದರು. ನಂತರ ಸಂತೇ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ವ್ಯಾಪಾರಿಗಳ ಕಷ್ಟ ಸುಖ ಆಲಿಸಿ, ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸಿದರು. ಸಂತೆ ನಡೆಯುವ ಹಿಂಭಾಗ ಸ್ವಚ್ಛತೆ ಇಲ್ಲದೇ ಇರುವುದನ್ನು ಪರಿಶೀಲಿಸಿದರು.
ರಸ್ತೆ ಮೇಲೆ ಕುಡಿಯುವ ನೀರು ಪೋಲಾಗಿ ಹೋಗುತ್ತಿರುವುದು, ನಿಲ್ದಾಣದ ಹಿಂಭಾಗ ಗಿಡಗಂಟೆ ಬೆಳೆದಿರುವುದನ್ನು ಗಮನಿಸಿ ಕೂಡಲೇ ಸ್ವಚ್ಛತೆ ಮಾಡಲು ಆದೇಶ ಮಾಡಿದರು. ಸಂತೆ ನಡೆಸಲು ಶೀಘ್ರದಲ್ಲಿಯೇ ಜಾಗ ಗುರುತು ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಹಾಸನಾಂಬ ಒಳಾಂಗಣ ಕ್ರೀಡಾಂಗಣಕ್ಕೂ ಹೋಗಿ ಪರಿಶೀಲಿಸಿದರು. ಈಜು ಕೊಳದಲ್ಲಿ ನೀರನ್ನು ಸ್ವಚ್ಛವಾಗಿಡಲು ಸಲಹೆ ನೀಡಿದರು.

[…] ಹಾಸನ: ಡಿಸಿ ಲತಾಕುಮಾರಿ ನಗರ ರೌಂಡ್ಸ್: ಕಾರ್… […]