ಹಾಸನ: ವೇತನ ಪರಿಷ್ಕರಣೆ ಹಾಗೂ 38 ತಿಂಗಳ ಹಿಂದಿನ ಬಾಕಿ ಹಣ ಕೊಡಲು ವಿಳಂಬ ಮಾಡುತ್ತಿರುವ ರಾಜ್ಯ ಸರಕಾರದ ನಡೆ ಖಂಡಿಸಿ ಜು.30 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ಹಾಗೂ ಆ.5ರಿಂದ ಸಾರಿಗೆ ನೌಕರರು ಹಾಗೂ ಅನೇಕ ಕಾರ್ಮಿಕ ಸಂಘಟನೆಗಳು ಸೇರಿ ಅನಿರ್ದಿಷ್ಟವಾಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ ಧರ್ಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಎಸ್ಆರ್ಡಿಸಿ ನೌಕರರಿಗೆ ಬರಬೇಕಾದ 38 ತಿಂಗಳ ಹಿಂಬಾಕಿಯನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ನಿಯಮದಂತೆ 2024, ಜ. 1 ರಿಂದ ವೇತನ ಪರಿಷ್ಕರಣೆ ಬಾಕಿ ಹಾಗೂ ಇನ್ನಿತರೆ ಬೇಡಿಕೆ ಮುಂದಿಟ್ಟು ಆ.5 ರಿಂದ ಸಾರಿಗೆ ನಿಗಮದ ಎಲ್ಲ ನೌಕರರು ಕರ್ತವ್ಯ ಸ್ಥಗಿತಗೊಳಿಸಿ, ಎಲ್ಲ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದರು.
ಸಾರಿಗೆ ನೌಕರರ ನ್ಯಾಯಯುತ ಹೋರಾಟಕ್ಕೆ ಸಿಐಟಿಯು ಸಂಪೂರ್ಣ ಬೆಂಬಲಿಸಿ ಭಾಗವಹಿಸುತ್ತದೆ ಎಂದರು. ಹಿಂದಿನ ಬಿಜೆಪಿ ಸರ್ಕಾರ ವೇತನ ಪರಿಷ್ಕರಣೆ ನಡೆಸಿ ಶೇ.15 ರಷ್ಟು ಹೆಚ್ಚಳ ಮಾಡಲು ಒಪ್ಪಿಗೆ ನೀಡಿತ್ತು. ಆದರೆ ಆ ಸರಕಾರ ಇರುವವರೆಗೂ ಜಾರಿ ಮಾಡಿಲ್ಲ. ಈ ಸರ್ಕಾರ ಸಹ ವೇತನ ಪರಿಷ್ಕರಣೆ ಜಾರಿಗೆ ತಂದರೂ 38 ತಿಂಗಳ 1800 ಕೋಟಿ ಹಿಂಬಾಕಿ ನೀಡಿಲ್ಲ ಎಂದು ದೂರಿದರು. ಸರಕಾರದ ಧೋರಣೆ ಖಂಡಿಸಿ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನ ಆಗಿಲ್ಲ. ಜು.4 ರಂದು ನಡೆದ ತ್ರಿಪಕ್ಷೀಯ ಸಭೆಯಲ್ಲಿ ಹಿಂಬಾಕಿ ನೀಡಲು ಸಾಧ್ಯವಿಲ್ಲ ಎಂದಿರುವುದನ್ನು ಖಂಡಿಸಿದರು.
ಕೆ.ಎಸ್.ಆರ್.ಟಿ.ಸಿ. ಪರಿಶಿಷ್ಟ ಜಾತಿ, ಪಂಗಡದ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್ ಮಾತನಾಡಿ, ತ್ರಿಪಕ್ಷಿಯ ಒಡಂಬಡಿಕೆಯಂತೆ ಪ್ರತಿ 4 ವರ್ಷಗಳಿಗೊಮ್ಮೆ ನೌಕರರ ವೇತನ ಪರಿಷ್ಕರಣೆಯಾಗಬೇಕು. ಈ ಪ್ರಕಾರ, 2024 ಏ.1 ರಿಂದಲೇ ವೇತನ ಪರಿಷ್ಕರಣೆಯಾಗಬೇಕಿತ್ತು. ಕಳೆದ 18 ತಿಂಗಳಿನಿಂದ ಕಾಲ ಹರಣ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ನಾವೂ ಕಾರಣ. ಆದರೆ ನಮ್ಮ ಮನವಿಗೆ ಸರ್ಕಾರಕ್ಕೆ ಸ್ಪಂದಿಸುತ್ತಿಲ್ಲ ಎಂದು ಕಿಡಿ ಕಾರಿದರು.
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಆ.4 ರವರೆಗೆ ಸರ್ಕಾರಕ್ಕೆ ಅವಕಾಶ ನೀಡಿದೆ. ಅಷ್ಟರೊಳಗೆ ನಮ್ಮೊಂದಿಗೆ ಸಭೆ ನಡೆಸಿ ಬೇಡಿಕೆ ಈಡೇರಿಸದೇ ಇದ್ದರೆ ಆ.5 ರಿಂದ ಎಲ್ಲಾ ನೌಕರರು ತಮ್ಮ ಕೆಲಸ ಕೈ ಬಿಟ್ಟು ಮುಷ್ಕರ ನಡೆಸಲಿದ್ದಾರೆ. ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರ ಸಭೆ ನಡೆಸಿ ಇತ್ಯರ್ಥಗೊಳಿಸುವ ಬದಲು ಎಸ್ಮಾ ಜಾರಿ ಅಸ್ತ್ರ ಪ್ರಯೋಗಮಾಡಿದೆ. ಆದರೆ ಇದಕ್ಕೆ ನಾವು ಹೆದರುವುದಿಲ್ಲ ಎಂದು ಎಚ್ಚರಿಸಿದರು. ಒಂದು ವೇಳೆ ಹೋರಾಟಗಾರರ ಮೇಲೆ ಎಸ್ಮಾ ಜಾರಿ ಮಾಡಿ ಏನಾದರೂ ತೊಂದರೆ ಆದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.
ವಿರೋಧ ಪಕ್ಷದಲ್ಲಿದ್ದಾಗ ಸಾರಿಗೆ ನೌಕರರ ಪರವಾಗಿ ಮಾತನಾಡುವ ನಾಯಕರು, ಅಧಿಕಾರ ಸಿಕ್ಕಾಗ, ಜಾಣ ಕಿವುಡು, ಮರೆವು ಪ್ರದರ್ಶನ ಮಾಡುತ್ತಾರೆ. ಈ ಧೋರಣೆ ಖಂಡಿಸಿ ಅನಿರ್ದಿಷ್ಟ ಹೋರಾಟ ಹೋರಾಟಕ್ಕೆ ಮುಂದಾಗಿದ್ದೇವೆ. ಅದಕ್ಕೂ ಮುನ್ನ ಸರ್ಕಾರವನ್ನು ಎಚ್ಚರಿಸಲು ಜು.30ರಂದು ಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು.
ವೈ.ಎಸ್.ಲಕ್ಷ್ಮೀಗೌಡ, ವಿ.ಜೆ.ಮಂಜೇಗೌಡ, ಮುಖಂಡ ಮುರಳೀಧರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್ ಇದ್ದರು.
