ಹಾಸನ- ಬಲವಂತದ ಹಾಗೂ ಅನ್ಯಾಯದ ಭೂಸ್ವಾಧೀನ ವಿರೋಧಿಸಿ ಜೂ.25ರಂದು ದೇವನಹಳ್ಳಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಸುಮಾರು 1777 ಎಕರೆ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಕೆ.ಐ.ಎ.ಡಿ.ಬಿ ಸ್ವಾಧೀನಾ ಪಡಿಸಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ಇದೇ 25 ರಂದು ದೇವನಹಳ್ಳಿ ಚಲೋಗೆ ಕರೆ ನೀಡಲಾಗಿದೆ ಎಂದರು.
ಕಳೆದ 1182 ದಿನಗಳಿಂದ ರೈತರು ಭೂ ಸ್ವಾಧೀನ ವಿರೋಧಿಸಿ ಅಧಿಸೂಚನೆ ಕೈಬಿಡುವಂತೆ ಹೋರಾಟವನ್ನು ನಿರಂತರವಾಗಿ ನಡೆಸುತ್ತಿದ್ದು, ಕಳೆದ ಬಿ.ಜೆ.ಪಿ ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಕೆ.ಐ.ಎ.ಡಿ.ಬಿ ಕಾಯಿದೆ ಕಲಂ 28(1)ರ ಪ್ರಕಾರ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿದಾಗ ಇದನ್ನು ವಿರೋಧಿಸಿ ಆ ಭಾಗದ ರೈತರು ಪ್ರತಿಭಟನೆ ಸತ್ಯಾಗ್ರಹವನ್ನು ಪ್ರಾರಂಭಿಸಿದಾಗ ವಿರೋಧ ಪಕ್ಷದ ನಾಯಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಈ ಹೋರಾಟವನ್ನು ಬೆಂಬಲಿಸಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಲತ್ಕಾರ ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲವೆಂದು ಇದನ್ನು ರದ್ದುಪಡಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಆದರೆ ಅಧಿಕಾರಕ್ಕೆ ಬಂದ ನಂತರ ಬಿ.ಜೆ.ಪಿ ಸರ್ಕಾರ ತಂದಿದ್ದ. ಅಧಿಸೂಚನೆಯನ್ನು ಮುಂದುವರೆಸಿ ಕಾಯಿದೆ ಕಲಂ 28(4)ರ ರಿತ್ಯಾ ಅಂತಿಮ ಅಧಿಸೂಚನೆ ಹೊರಡಿಸಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಯು.ಪಿ.ಎ ಸರ್ಕಾರ ತಂದಿರುವ 2013ರ ಭೂ ಸ್ವಾಧೀನ ಕಾಯಿದೆಗೆ ವ್ಯತಿರಿಕ್ತವಾಗಿ ನಡೆದುಕೊಂಡು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ದೂರಿದರು.
ಮಾತಿಗೆ ತಪ್ಪಿದ ಸರ್ಕಾರದ ನೀತಿಯನ್ನು ಖಂಡಿಸಿ. ಭೂ ಸ್ವಾಧೀನವನ್ನು ಕೈ ಬಿಡಲೇಬೆಕೆಂದು ಆಗ್ರಹಿಸಿ 25 ರಂದು ಹಮ್ಮಿಕೊಂಡಿರುವ “ದೇವನಹಳ್ಳಿ ಚಲೋ” ಕಾರ್ಯಕ್ರಮದಲ್ಲಿ ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ವಿಧ್ಯಾರ್ಥಿ ಚಳುವಳಿಗಾರರು ಅಲ್ಲದೇ ಪ್ರಗತಿ ಪರ ಹೋರಾಟಗಾರರು, ಸಾಹಿತಿಗಳು, ಕಲಾವಿದರು ರಾಜ್ಯದ ಮೂಲೆ ಮೂಲಗಳಿಂದಲೂ ದೇವನಹಳ್ಳಿಗೆ ಬಂದು ತಹಶೀಲ್ದಾರ್ ಕಛೇರಿಯ ಮುಂದೆ ಪ್ರತಿಭಟಿಸಲಿದ್ದು, ಅನಿರ್ಧಿಷ್ಟ ಕಾಲ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾವೇರಿ ಆರತಿ ಬೇಡ – ಅಮ್ಯೂಸ್ಮೆಂಟ್ ಪಾರ್ಕ್ ಬೇಡವೇ ಬೇಡ: 92 ಕೋಟಿ ರೂ. ವೆಚ್ಚದೊಂದಿಗೆ ಕಾವೇರಿ ಆರತಿ ಎಂಬ ಅರ್ಥಹೀನ ಕಾರ್ಯಕ್ರಮವನ್ನು ಸರ್ಕಾರ ನಡೆಸಲು ಮುಂದಾಗಿರುವುದನ್ನು ಸಂಘವು ವಿರೋಧ ಮಾಡುತ್ತಿದ್ದು, ಈ ಮೌಡ್ಯದ ಕಾರ್ಯಕ್ರಮವನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತ್ತದೆ ಎಂದರು.
ಕನ್ನಂಬಾಡಿ ಕಟ್ಟೆ ನಿರ್ಮಾಣವಾಗಿ 90 ವರ್ಷಗಳಾಗುತ್ತಿದೆ. ಸಾರ್ವಜನಿಕವಾಗಿ ಅಭಿಪ್ರಾಯವನ್ನು ಸಂಗ್ರಹಿಸದೇ ಕಾನೂನು ಕ್ರಮಗಳನ್ನು ಅನುಸರಿಸದೇ ಕೆ.ಆರ್.ಎಸ್ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡುವ ಸರ್ಕಾರದ ಕ್ರಮ ಜನ ವಿರೋಧಿಯಾಗಿದೆ. ಪರಿಸರ ವಿರೋಧಿಯಾಗಿದೆ. ಅಲ್ಲದೇ ಡ್ಯಾಂ ಸೇಫ್ಟಿ ಬಿಲ್ಲಿಗೆ ವಿರೋಧವಾಗಿದೆ. ಈ ಹಿಂದೆ ಇದೇ ರೀತಿಯ ಡಿಸ್ನಿಲ್ಯಾಂಡ್ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲು ಮುಂದಾದಾಗ ಸಂಘವು ತೀವ್ರವಾಗಿ ಪ್ರತಿಭಟಿಸಿ ಇದಕ್ಕೆ ಅವಕಾಶ ನೀಡಿರಲಿಲ್ಲ, ಈಗಲೂ ಅಮ್ಯೂಸ್ಮೆಂಟ್ ಪಾರ್ಕ್ ಗೆ ಮಂಡ್ಯ ಜಿಲ್ಲೆಯ ಜನತೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾವೇರಿ ಜಲಾನಯನ ಪ್ರದೇಶದ ಜನರ ವಿರೋಧವು ಕೂಡ ಇದೆ. ಸರ್ಕಾರ ಗೌರವವಾಗಿ ಈ ಯೋಜನೆಯನ್ನು ರದ್ದುಪಡಿಸಿದರೆ ಒಳ್ಳೆಯದು ಎಂದು ಸಂಘವು ಒತ್ತಾಯಿಸುತ್ತದೆ ಎಂದರು.
ಬೀಜ, ಗೊಬ್ಬರ ವಿತರಣೆ ಸಮರ್ಪಕವಾಗಿಲ್ಲ: ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿ ತಿಂಗಳುಗಳೇ ಕಳೆದಿದೆ ಆದರೆ, ಕೃಷಿ ಇಲಾಖೆ ರೈತರಿಗೆ ಬೇಕಾದ ಬೀಜ, ಗೊಬ್ಬರವನ್ನು ಸಮರ್ಪಕವಾಗಿ ಪೂರೈಸದೇ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಿದೆ.
ಬೇಡಿಕೆ ಇದ್ದಷ್ಟು ಬೀಜ ಮತ್ತು ಗೊಬ್ಬರವನ್ನು ಪೂರೈಸದೇ ಇರುವುದರಿಂದ ನಕಲಿ ಬೀಜ ಮತ್ತು ಗೊಬ್ಬರಗಳ ಹಾವಳಿ ಹೆಚ್ಚಾಗಿದೆ. ನಕಲಿ ಬೀಜ ಮತ್ತು ಗೊಬ್ಬರದ ಹಾವಳಿಯನ್ನು ಸರ್ಕಾರ ಕೂಡಲೇ ನಿಯಂತ್ರಿಸಿ, ರೈತರ ಬೇಡಿಕೆಯನ್ನು ಪೂರೈಸಬೇಕೆಂದು ಸಂಘವು ಆಗ್ರಹಿಸುತ್ತದೆ ಎಂದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಘು ಹಿರಿಸಾವೆ, ತಾಲೂಕು ಘಟಕದ ಅಧ್ಯಕ್ಷ ಶಾಂತರಾಜೇ ಅರಸ್, ಕಾರ್ಯದರ್ಶಿ ಎಂ.ಎಲ್. ಹರೀಶ್, ಮಂಜೇಗೌಡ ಕೆ.ಆರ್. ಪೇಟೆ, ಶಿವೇಗೌಡ ಇದ್ದರು.

[…] […]