ಹಾಸನ, ಏಪ್ರಿಲ್ 12: ಆಶ್ರಯ ಯೋಜನೆಯಡಿ ಹಕ್ಕುಪತ್ರ ಹೊಂದಿರುವ ಮನೆಗಳನ್ನು ಹಾನಿಗೊಳಿಸಿರುವುದನ್ನು ಖಂಡಿಸಿ, ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಒದಗಿಸುವಂತೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಾಲ್ಕನೇ ದಿನಕ್ಕೂ ಮುಂದುವರಿಯಿತು.
ಪ್ರತಿಭಟನಾ ಸ್ಥಳದಲ್ಲೇ ಧನಕರುಗಳಿಗೆ ಮೇವು ನೀಡಿ, ಅಡುಗೆ ಸಿದ್ಧಪಡಿಸಿ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಎಬಿಎಂ ಹಳ್ಳಿಯ ನಿವಾಸಿಗಳಿಗೆ 1991-92ರಲ್ಲಿ ತಹಶೀಲ್ದಾರ್ ವತಿಯಿಂದ ಆಶ್ರಯ ಯೋಜನೆ (L&D 37/91-92) ಅಡಿಯಲ್ಲಿ ಕಾನೂನುಬದ್ಧವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು ಎಂದು ವಿವರಿಸಿದರು. ಆ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ದಶಕಗಳಿಂದ ವಾಸವಾಗಿದ್ದೇವೆ ಎಂದರು.
ಆದರೆ ಇತ್ತೀಚೆಗೆ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಯಾವುದೇ ಪೂರ್ವ ನೋಟಿಸ್ ನೀಡದೆ ಹಾಗೂ ಕಾನೂನು ಪ್ರಕ್ರಿಯೆ ಅನುಸರಿಸದೆ ಮನೆಗಳಿಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದರು. ಕೆಲ ಮನೆಗಳ ಗೋಡೆಗಳನ್ನು ಕೆಡವಲಾಗಿದ್ದು, ಕೆಲವು ಮನೆಗಳನ್ನು ತೆರವುಗೊಳಿಸಲು ಯತ್ನಿಸಿರುವುದರಿಂದ ಕುಟುಂಬಗಳು ಆತಂಕದಲ್ಲಿ ದಿನ ಕಳೆಯುವಂತಾಗಿದೆ ಎಂದು ಹೇಳಿದರು.
ತಾಲ್ಲೂಕು ಆಡಳಿತವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹಕ್ಕುಪತ್ರದಾರರ ಮೇಲೆ ಅನ್ಯಾಯ ಮಾಡುತ್ತಿದೆ. ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳದೇ ಅವರಿಗೆ ಸಹಕಾರ ನೀಡುತ್ತಿರುವುದು ಅಸಂವಿಧಾನಿಕ ನಡೆ ಎಂದು ಕಿಡಿಕಾರಿದರು. ಜಾಗದ ಸರಿಯಾದ ಅಳತೆ ಹಾಗೂ ಗುರುತುಪಡಿಸುವ ಕೆಲಸ ಮಾಡದೇ ನಿಜವಾದ ಹಕ್ಕುದಾರರನ್ನು ತೊಂದರೆಗೊಳಿಸಲಾಗುತ್ತಿದೆ ಎಂದು ದೂರಿದರು.
ಈ ಘಟನೆ ಮೂಲಭೂತ ಹಕ್ಕುಗಳ ಮೇಲಿನ ಸ್ಪಷ್ಟ ಹಲ್ಲೆಯಾಗಿದ್ದು, ಬಡ ಕುಟುಂಬಗಳನ್ನು ಅನಾಥರನ್ನಾಗಿ ಮಾಡುವ ಪ್ರಯತ್ನವಾಗಿದೆ. ತಕ್ಷಣವೇ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಪ್ರಮುಖ ಬೇಡಿಕೆಗಳು:
- ಮನೆಗಳ ಧ್ವಂಸ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು
- ಹಾನಿಗೊಳಿಸಿದ ಮನೆಗಳಿಗೆ ಸಮರ್ಪಕ ಪರಿಹಾರ ನೀಡಬೇಕು
- ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
- ಹಕ್ಕುಪತ್ರದ ಆಧಾರದ ಮೇಲೆ ವಾಸಸ್ಥಳ ರಕ್ಷಣೆ ಮಾಡಬೇಕು
- ಸಾರ್ವಜನಿಕ ಯೋಜನೆಗಾಗಿ ಜಾಗ ಬೇಕಾದರೆ ಕಾನೂನುಬದ್ಧ ಪರಿಹಾರ ಹಾಗೂ ಪುನರ್ವಸತಿ ಒದಗಿಸಬೇಕು
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಸಾದಿಕ್, ಮುಖಂಡರಾದ ಪವಿತ್ರ, ಅಕ್ಮಲ್ ಪಾಷಾ, ವಿಠಲ್ ಸೇರಿದಂತೆ ಹಲವಾರು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.