ಹಾಸನ: ಸರ್ಕಾರ ಕಂಪನಿಗಳ ಮೂಲಕ ರೈತರಿಗೆ ಕಳಪೆ ಗುಣಮಟ್ಟದ ಜೋಳದ ಬೀಜ ನೀಡಲಾಗಿದ್ದು, ಬೆಳೆಗೆ ಆಗಿರುವ ನಷ್ಟದ ಬಗ್ಗೆ ಪರಿಹಾರ ನೀಡಲು ಆಗ್ರಹಿಸಿ ನಕಲಿ ಕಂಪನಿಗಳ ಪ್ರತಿಕೃತಿದಹಿಸಿ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗುವ ಮೂಲಕ ರೈತರು ತಮ್ಮ ಆಕ್ರೋಶ ಹೊರ ಹಾಕಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ನಕಲಿ ಕಂಪನಿಗಳ ಪ್ರತಿಕೃತಿಯನ್ನು ಹೆಗಲು ಮೇಲೆ ಹೊತ್ತು ಹೊರಟ ಪ್ರತಿಭಟನಾ ಮೆರವಣಿಗೆ ಎನ್.ಆರ್.ವೃತ್ತ, ಬಿ.ಎಂ. ರಸ್ತೆ ಮೂಲಕ ಸಂತೆಪೇಟೆ ವೃತ್ತ ತಲುಪಿತು. ಇಲ್ಲಿ ಮಾನವ ಸರಪಳಿ ರಚಿಸಿ ಪ್ರತಿಕೃತಿ ಸುಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದ ಗಂಗಾಧರ್ ಮಾತನಾಡಿ, ಉತ್ತಮ ಮಳೆಯಾಗಿ ಜೂನ್ನಲ್ಲೇ ಜಲಾಶಯಗಳು ಭರ್ತಿಯಾಗಿವೆ. ರಾಜ್ಯದಲ್ಲಿ ಉತ್ತಮ ಬಿತ್ತನೆಯಾಗಿದೆ. ಆದರೇ ಕೃಷಿ ಮತ್ತು ತೋಟಗಾರಿಕ ಇಲಾಖೆ ಬೀಜ ಸಂಬಂಧಿತ ಕಾಯಿದೆ ಪರಿಪಾಲನೆ ಮಾಡುವಲ್ಲಿ ಸೋತಿದೆ.
ಅಧಿಕೃತವಾಗಿ ಸರ್ಕಾರದ ಬಿಡ್ಡಿಗೆ ಮತ್ತು ಕೃಷಿ ಇಲಾಖೆಗೆ ಸರಬರಾಜು ಮಾಡದೆ ಇರುವ ಕಂಪನಿಗಳ ಜೊತೆ ಕೃಷಿ ನಿರ್ದೇಶಕರು ಶಾಮಿಲಾಗಿ ರೈತರಿಗೆ ಕಳಪೆ ಬೀಜ ನೀಡಿರುವ ಮತ್ತು ಕಂಪನಿಯವರು ರೈತರಿಗೆ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ನಷ್ಟ ತುಂಬಿಕೊಡಬೇಕೆಂದರು.
ಸಾಮೂಹಿಕವಾಗಿ ರೈತರಿಗೆ ಜಿಲ್ಲಾಡಳಿತದಿಂದ ಉಚಿತವಾಗಿ ಬೆಳೆ ವಿಮೆ ಮಾಡಿಕೊಡಬೇಕು ಎಂದರು. ಕಳಪೆ ಬೀಜವನ್ನು ಕೃಷಿ ಇಲಾಖೆಯವರ ಹೆಸರು ಬಳಸಿಕೊಂಡು ಪ್ರಚಾರದಲ್ಲಿ ತೊಡಗಿರುವರ ವಿರುದ್ದ ಮೊಕದ್ದಮೆ ದಾಖಲಿಸಿ ಮತ್ತು ಕೃಷಿ ಇಲಾಖೆಗೆ ಸರಬರಾಜು ಮಾಡದೆ ಇರುವ ಕಂಪನಿಯವರನ್ನು ಅಂಗಡಿ ಮೂಲಕ ಮಾರುವುದನ್ನು ನಿಬರ್ಂಧಿಸಬೇಕು. ಬೆಳೆ ಸಮೀಕ್ಷೆಯನ್ನು ತಾಲ್ಲೂಕು ಆಡಳಿತ ಅಧಿಕಾರಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜೊತೆಗೂಡಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಬೆಳೆ ನಾಶವಾಗಿರುವ ರೈತರಿಗೆ ಕಂಪನಿಯವರಿಂದಲೆ ಕೃಷಿ ಇಲಾಖೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಕೊಡಿಸಬೇಕು ಹಾಗೂ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಹೆಸರನ್ನು ಅನುಮತಿ ಇಲ್ಲದೆ ಬಳಸಿಕೊಂಡು ಕರಪತ್ರ ಮುದ್ರಿಸಿ ಇಲಾಖೆ ದುರುಪಯೋಗ ಪಡಿಸಿಕೊಂಡಿರುವ ಬಿತ್ತನೆ ಬೀಜದ ಹೈಟೆಕ್ ಕಂಪನಿ ಮತ್ತು ಏಜೆನ್ಸಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷೀಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ, ಮುಖಂಡರಾದ ತಿಪಟೂರು ಜಯಚಂದ್ರ ಶರ್ಮ, ಮೈಸೂರಿನ ಕಿರಣ್, ರೈತ ಸಂಘದ ಜಿಲ್ಲಾಧ್ಯಕ್ಷ ಮೂರ್ತಿ ಕಣಗಾಲ್, ಗ್ಯಾರಂಟಿ ರಾಮಣ್ಣ, ಮಂಜು ಬಿಟ್ಟಗೌಡನಹಳ್ಳಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮರ್ಕುಲಿ ಪ್ರಕಾಶ್, ತಾಲೂಕು ಅಧ್ಯಕ್ಷ ಬಿಟ್ಟಗೌಡನಹಳ್ಳಿ ಮಂಜುನಾಥ್, ಪಾಲಾಕ್ಷ ಮಾರನಹಳ್ಳಿ, ಶಿವಕುಮಾರ್ ಹಳೇಬೀಡು, ಶೇಷಣ್ಣ, ಕಾಂತರಾಜು ಮೊದಲಾದವರಿದ್ದರು.
