ಹಾಸನ: ನಗರದ ಕೆ.ಆರ್.ಪುರಂನಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ರೈತರು ರಸ್ತೆ ಮಧ್ಯೆ ಟೆಂಟ್ ಹಾಕಿಕೊಂಡು, ಸ್ಥಳದಲ್ಲಿಯೇ ಮಧ್ಯಾಹ್ನದ ಊಟ ತಯಾರಿಸಿ, ಜಮೀನು ಹರಾಜು ತಡೆಯುವಂತೆ ಆಗ್ರಹಿಸಿ ಧರಣಿ ನಡೆಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವದ ಹಾಸನ ಜಿಲ್ಲಾ ಘಟಕದ ರಾಜ್ಯ ವರಿಷ್ಠ ಕೆ.ಟಿ. ಗಂಗಾಧರ್ ಮಾಧ್ಯಮದೊಂದಿಗೆ ಮಾತನಾಡಿ, “ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೈತರು ಬೆಳೆ ಬೆಳೆಯಲು ತೆಗೆದುಕೊಂಡ ಸಾಲವನ್ನು ಏಕಗಂಟು ತೀರುವಳಿ ಮೂಲಕ ತೀರಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾತ್ರ ರೈತರಿಗೆ ಈ ಸೌಲಭ್ಯ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಏಕಗಂಟು ಮುಖಾಂತರ ತೀರುವಳಿ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಮತ್ತು ಅಸಲಿನಲ್ಲಿಯೇ ರಿಯಾಯಿತಿ ನೀಡಬೇಕು” ಎಂದು ಒತ್ತಾಯಿಸಿದರು.
ಅವರು ಮುಂದುವರಿದು, “ಬ್ಯಾಂಕ್ಗಳು ಲಾಯರ್ ಹಾಗೂ ಕೋರ್ಟ್ ಮುಖಾಂತರ ನೋಟಿಸ್ ನೀಡುತ್ತಿದ್ದು, ಇ-ಹರಾಜು ಹಾಕುತ್ತೇವೆ ಎಂಬ ಭಯದ ವಾತಾವರಣವನ್ನು ರೈತರಲ್ಲಿ ಸೃಷ್ಟಿಸುತ್ತಿವೆ. ಇಂತಹ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು. ರೈತರು ಬೆಳೆ ಬೆಳೆಯಲು ಸಾಲ ಮಾಡಿದ ಸಂದರ್ಭದಲ್ಲಿ ಬೆಳೆ ನಷ್ಟವಾದರೂ ಅಥವಾ ಆಕಸ್ಮಿಕವಾಗಿ ರೈತರು ಸಾವಿಗೀಡಾದರೂ ಆ ಸಾಲವನ್ನು ಮನ್ನಾ ಮಾಡಬೇಕು. ಬ್ಯಾಂಕ್ ಅಧಿಕಾರಿಗಳು ರೈತರೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸಬೇಕು. ವಿನಾಕಾರಣ ಮುಖ್ಯ ಕಚೇರಿ ಬಳ್ಳಾರಿಗೆ ಹೋಗಿ ಎಂದು ಹೇಳದೆ, ಪ್ರತಿ ಮೂರು ತಿಂಗಳಿಗೊಮ್ಮೆ ಬಳ್ಳಾರಿ ಹೆಡ್ ಆಫೀಸ್ನವರು ಹಾಸನ ವೃತ್ತ ಕಚೇರಿಗೆ ಬಂದು ರೈತರ ಅಹವಾಲನ್ನು ಸ್ವೀಕರಿಸಬೇಕು. ಅದರ ಕುರಿತು ಮಾಹಿತಿ ಪ್ರತಿ ಶಾಖೆಗಳಲ್ಲೂ ರೈತರಿಗೆ ನೀಡಬೇಕು” ಎಂದು ಹೇಳಿದರು.
ಇನ್ನು ಸರ್ಕಾರದಿಂದ ರೈತರ ಜೀವನೋಪಾಯಕ್ಕೆ ಬರುವ ವೃದ್ದಾಪ್ಯ ವೇತನ, ಹಾಲಿನ ಹಣ, ಪ್ರಧಾನಮಂತ್ರಿ ಸಮ್ಮಾನ್ ಕಿಸಾನ್ ನಿಧಿ ಸೇರಿದಂತೆ ಯಾವುದೇ ಸಹಾಯಧನವನ್ನು ಬ್ಯಾಂಕ್ ಜಮಾಮಾಡಿಕೊಳ್ಳಬಾರದು ಎಂದು ಅವರು ಎಚ್ಚರಿಸಿದರು.
ಕುಂದೂರು ಹೋಬಳಿಯ ಕೆ.ಪಿ. ರಾಜೇಗೌಡ ಅವರು ಸಾಲದ ಒತ್ತಡದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೆಲವೇ ದಿನಗಳಲ್ಲಿ ಅವರ ಪತ್ನಿಯೂ ಸಾವಿಗೀಡಾಗಿದ್ದಾರೆ. ಇದೀಗ ಮಗಳು ಒಬ್ಬಳೇ ಉಳಿದಿದ್ದು, ಬ್ಯಾಂಕ್ನ ಕ್ರಮದಿಂದ ಇಡೀ ಕುಟುಂಬ ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ವರಿಷ್ಠ ಕಣಗಾಲ್ ಮೂರ್ತಿ, ರಾಜ್ಯ ಅಧ್ಯಕ್ಷೀಯ ಮಂಡಳಿಯ ಸದಸ್ಯ ಗ್ಯಾರಂಟಿ ರಾಮಣ್ಣ, ತಾಲೂಕು ಮರ್ಕಲಿ ಪ್ರಕಾಶ್, ಮಂಜು ಬಿಟ್ಟಗೌಡನಹಳ್ಳಿ, ಅರಕಲಗೂಡು ತಾಲೂಕಿನ ಬುವನೇಶ್, ಬೇಲೂರು ತಾಲೂಕಿನ ಭೂಗ ಮಲ್ಲೇಶ್, ಕುಮಾರಸ್ವಾಮಿ ಸೇರಿದಂತೆ ಅನೇಕ ರೈತ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
