ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿ ಲಿಂಗ್ಲಾಪುರ ಗ್ರಾಮದಲ್ಲಿ ಸರ್ಕಾರಿ ಜಾಗ ಮತ್ತು ಕೆರೆ ಒತ್ತುವರಿ ಕುರಿತು ಪ್ರಶ್ನೆ ಮಾಡಿದ ದೂರುದಾರರ ಕುಟುಂಬದ ಮೇಲೆ ಪಿಡಿಓ ಹಾಗೂ ಆತನ ತಮ್ಮ ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಬಾಣಾವರ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಕುಮಾರಸ್ವಾಮಿ ಹಾಗೂ ಆತನ ತಮ್ಮ, ಗ್ರಾಮ ಪಂಚಾಯತ್ ಸದಸ್ಯ ನಾಗೇಂದ್ರ ವಿರುದ್ಧ ಸರ್ಕಾರಿ ಕೆರೆ ಮತ್ತು ಜಾಗ ಒತ್ತುವರಿ ಆರೋಪವಿದ್ದು, ಈ ಬಗ್ಗೆ ದೂರು ನೀಡಿದ್ದಕ್ಕೆ ದೂರುದಾರ ಗಿರೀಶ್ ಕುಟುಂಬದ ಮೇಲೆ ಏಕಾಏಕಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಘಟನೆ ವೇಳೆ ಆರೋಪಿಗಳು ಮಚ್ಚು, ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಗಿರೀಶ್ ಕುಟುಂಬದ ಮೂವರು ಸದಸ್ಯರು — ಮೂರ್ತಿ, ಪಾಪಣ್ಣ ಹಾಗೂ ರೇವಣ್ಣ — ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನೀಲಿಗಿರಿ ಕಾವಲ್ ಗ್ರಾಮದ ಸರ್ವೆ ನಂಬರ್ 682ರಲ್ಲಿ ಒಟ್ಟು 3.20 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆಯಲ್ಲಿ ಪಿಡಿಓ ಕುಮಾರಸ್ವಾಮಿ ಸುಮಾರು 2 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಆರೋಪವಿದೆ. ಕೆರೆ ಒತ್ತುವರಿಯಿಂದ ಸಾರ್ವಜನಿಕರಿಗೆ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ ಎಂದು ದೂರುದಾರ ಗಿರೀಶ್ ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಸಚಿವರಿಗೆ ದೂರು ನೀಡಿದ್ದರು.
ಇದಲ್ಲದೆ, ತಮ್ಮ ಪ್ರಭಾವ ಬಳಸಿಕೊಂಡು ಸರ್ಕಾರಿ ಜಾಗದಲ್ಲೇ ಕೃಷಿ ಹೊಂಡ ನಿರ್ಮಿಸಿಕೊಂಡು, ಅದಕ್ಕೆ ಸರ್ಕಾರದಿಂದಲೇ ಅನುದಾನ ಪಡೆದುಕೊಂಡಿರುವ ಆರೋಪವೂ ಪಿಡಿಓ ಕುಮಾರಸ್ವಾಮಿ ವಿರುದ್ಧ ಕೇಳಿಬಂದಿದೆ.
ಈ ಎಲ್ಲಾ ಅಕ್ರಮಗಳನ್ನು ಪ್ರಶ್ನಿಸಿ ದೂರು ನೀಡಿದ್ದಕ್ಕೆ ಪ್ರತಿಕಾರವಾಗಿ ದೂರುದಾರರ ಕುಟುಂಬದ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆಯ ಭಯಾನಕ ದೃಶ್ಯಗಳು ಮೊಬೈಲ್ ಫೋನ್ನಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನೆ ಜಾವಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸರ್ಕಾರಿ ಹುದ್ದೆಯಲ್ಲಿರುವ ಅಧಿಕಾರಿಯೇ ಸಾರ್ವಜನಿಕ ಆಸ್ತಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಅದನ್ನು ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿರುವ ಆರೋಪ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
