ಹಾಸನ: ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಹಾಸನ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕ ಆದಿಶ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಬರೆದಿದ್ದ ಪತ್ರದ ಹಿನ್ನೆಲೆಯಲ್ಲಿ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಪಾಲಿಕೆ ಆರೋಗ್ಯ ನಿರೀಕ್ಷಕರಾದ ಎಸ್.ಎನ್.ಪ್ರಸಾದ್ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ, ಮೂಲತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿಯೋಜನೆಗೊಂಡರುವ ಆದೀಶ್ ಕುಮಾರ್ ಇವರು ಸರ್ಕಾರಿ ವಾಹನ ಉಪಯೋಗಿಸಿಕೊಂಡು ಪಾನಮತ್ತರಾಗಿ ಸಾರ್ವಜನಿಕ ಪ್ರದೇಶದಲ್ಲಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಇದನ್ನು ಆಧರಿಸಿ ಪ್ರಸಾದ್ ಹಾಗೂ ಆದೀಶ್ ಅವರನ್ನು ಆಯುಕ್ತು ಬಿಡುಗಡೆ ಮಾಡಿರುವುದರಿಂದ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಮುಂದುವರಿದು ಆದೀಶ್ ಕುಮಾರ್ ಅವರ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಕೂಡಲೇ ಶಿಸ್ತುಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಅದರ ಅನ್ವಯ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಹಾಗೂ ಶಿಸ್ತು ಪ್ರಾಧಿಕಾರದ ರವೀಂದ್ರ ಪಿ.ಆರ್. ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಇಲಾಖಾ ವಿಚಾರಣೆಗೆ ಸೂಚಿಸಲಾಗಿದ್ದು, ಸದರಿ ನೌಕರರ ಲೀನ್ನ್ನು ಅರಸೀಕೆರೆ ನಗರಸಭೆಯಲ್ಲಿ ಖಾಲಿ ಇರುವ ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆಗೆ ಸ್ಥಳಾಂತರಿಸಿದ್ದು, ಸದರಿ ನೌಕರ ಮೇಲಧಿಕಾರಿಗಳ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
