ಹಾಸನ- ಹಾಸನ ನಗರಸಭೆ ಇದೀಗ ಮಹಾನಗರ ಪಾಲಿಕೆಯಾಗಿ ಉನ್ನತೀಕರಣಗೊಂಡಿದ್ದು, ಹೆಚ್ಚಿನ ಅನುದಾನ ತಂದು ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಭರವಸೆ ನೀಡಿದರು.
ನಗರದ 80 ಅಡಿ ರಸ್ತೆ ಬಳಿ ಇರುವ ವಿಶ್ವನಾಥ ನಗರದಲ್ಲಿ 50 ಲಕ್ಷ ವೆಚ್ಚದ ಕಾಂಕ್ರೀಟ್ ಚರಂಡಿ ಮತ್ತು ಕವರಿಂಗ್ ಸ್ಪ್ಯಾಬ್ ಅಳವಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಹಾಸನದ ಅಭಿವೃದ್ಧಿಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಸಚಿವರಾಗಿದ್ದಾಗ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು.
ಅಲ್ಲದೆ ಇದೀಗ ಮಹಾನಗರ ಪಾಲಿಕೆ ಆಗಿರುವ ಹಿನ್ನೆಯಲ್ಲಿ ರಾಜ್ಯ ಸರಕಾರದಿಂದ ಮೂರು ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಸಹಕಾರದಲ್ಲಿ ಕೇಂದ್ರದಿಂದಲೂ ಸುಮಾರು 30 ಕೋಟಿ ಅನುದಾನ ಸಿಗುವ ಭರವಸೆ ಇದೆ ಎಂದರು.
ಈಗಾಗಲೇ ಮಹಾನಗರ ಪಾಲಿಕೆಗೆ ಸೇರಿರುವ ಹೆಚ್ಚುವರಿ 35 ಹಳ್ಳಿಗಳಲ್ಲಿ ಅನೇಕ ಸಮಸ್ಯೆಗಳಿದ್ದು ತನ್ನ ಗಮನಕ್ಕೆ ಬಂದಿದೆ. ಅವುಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ 100-150 ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆಗೆ ಒಳಗೊಂಡ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಚಂದ್ರೇಗೌಡ ಮಾತನಾಡಿ, ಹಾಸನ ನಗರ ವಾಸಿಗಳ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆಗಳನ್ನೂ ಬಗೆಹರಿಸಲು ನಾವು ಬದ್ಧರಾಗಿದ್ದೇವೆ. ಶಾಸಕರ ಸಹಕಾರದಿಂದ ಹಾಸನಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದರು.
ವಾರ್ಡ್ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮಾತನಾಡಿ, ವಾರ್ಡ್ ನಂ.30ಕ್ಕೆ ಸುಮಾರು 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ, ಹೆಚ್.ಡಿ. ರೇವಣ್ಣ ಅವರು ಉಸ್ತುವಾರಿ ಸಚಿವರಾಗಿದ್ದಾಗ 80 ಅಡಿ ರಸ್ತೆ ನಿರ್ಮಿಸಿ ಈ ಭಾಗದ ಜನರಿಗೆ ಭಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ ಸ್ವರೂಪ್ ಪ್ರಕಾಶ್ ಅವರು ಶಾಸಕರಾದ ಬಳಿಕ ನಮ್ಮ ಬಡಾವಣೆಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದಾರೆ ಎಂದರು.
ಈ ಭಾಗಕ್ಕೆ ಮುಖ್ಯವಾಗಿ ಕುಡಿಯುವ ನೀರು ಹಾಗೂ ಒಳ ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಅಬಿವೃದ್ಧಿ ಪಥದತ್ತ ಸಾಗುತ್ತಿರುವ ಬಡಾವಣೆಗೆ ಹೆಚ್ಚಿನ ಅನುದಾನ ನೀಡಿ ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಹಾಸನ ಮಹಾನಗರ ಪಾಲಿಕೆಯ ಮೇಯರ್ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.
ಭೂಮಿ ಪೂಜೆ ವೇಳೆ ಮಹಾನಗರ ಪಾಲಿಕೆಯ ಉಪ ಮೇಯರ್ ಹೇಮಲತಾ, ಎಇಇ ಚೆನ್ನೇಗೌಡ, ಎಇ ಆನಂದ್, ನಗರಸಭೆ ಸದಸ್ಯರು ಹಾಗೂ ಬಡಾವಣೆ ನಿವಾಸಿಗಳು ಹಾಜರಿದ್ದರು.
