ಹಾಸನ: ಮಾನವ ಹಕ್ಕುಗಳು ಪ್ರತಿಯೊಬ್ಬ ವ್ಯಕ್ತಿಯು ಘನತೆ, ಸ್ವಾತಂತ್ರ್ಯ, ಸ್ವಾಭಿಮಾನ, ಸಮಾನತೆ ಹಾಗೂ ಗೌರವದಿಂದ ಬದುಕಲು ಸಹಕಾರಿಯಾಗಿವೆ ಎಂದು ವಿಶ್ವ ಮಾನವ ಹಕ್ಕುಗಳ ರಕ್ಷಣಾ ಆಯೋಗದ ವಿಶ್ವಸ್ಥ ಮಂಡಳಿಯ ಸದಸ್ಯ ಬಾ. ನಂ. ಲೋಕೇಶ್ ಹೇಳಿದರು.
ನಗರದ ಪುಷ್ಕರಣಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿ ಹಾಸನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಹಕ್ಕುಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮಾನವನನ್ನು ಸಬಲಗೊಳಿಸುತ್ತವೆ. ಈ ದಿಸೆಯಲ್ಲಿ ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿ ಶಿಕ್ಷಣ ಹಾಗೂ ಜಾಗೃತಿಯನ್ನು ಮೂಡಿಸುವ ಮಹತ್ವದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯ ಜಿಲ್ಲಾಧ್ಯಕ್ಷ ವಿಶ್ವನಾಥ್ ಮಾತನಾಡಿ, ವಿಶ್ವದಾದ್ಯಂತ ನಡೆಯುತ್ತಿರುವ ಯುದ್ಧಗಳು, ಬಡತನ ಹಾಗೂ ಸಮಾನತೆ ಇಲ್ಲದಿರುವುದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿವೆ. ಇಂತಹ ಪರಿಸ್ಥಿತಿ ಮುಂದುವರಿದರೆ ಸಮಾಜ ಅಧಪತನದತ್ತ ಸಾಗುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿಯ ಜಿಲ್ಲಾ ಕಾರ್ಯದರ್ಶಿ ಮಾಲಿಂಗೇಗೌಡ, ಸದಸ್ಯರಾದ ಪೂರ್ಣಿಮಾ, ರಮಾನಂದ್, ಶಿವಸ್ವಾಮಿ, ರೇಖಾ, ಪರಶಿವಮೂರ್ತಿ, ಡಿ. ಸುಂದರೇಶ್ ಉಡುವೆರೆ, ವೀಣಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು, ಮಾನವ ಹಕ್ಕುಗಳ ಮಹತ್ವ ಕುರಿತು ಚರ್ಚಿಸಿದರು.

[…] ಇದನ್ನು ಓದಿ: ಹಾಸನ: ಮಾನವ ಹಕ್ಕುಗಳು ಘನತೆ ಹಾಗೂ ಗೌರವಯುತ … […]