ಹಾಸನ, ಜೂನ್ 12: ತವರು ಮನೆಯಿಂದ ವರದಕ್ಷಿಣೆ ತರುವಂತೆ ಒತ್ತಾಯಿಸಿ ಗರ್ಭಿಣಿ ಹೆಂಡತಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದ ಪತಿಯೊಬ್ಬನಿಗೆ ಹಾಸನದ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಹಣದ ದಂಡ ವಿಧಿಸಿದೆ.
ಕಡದರವಳ್ಳಿ ಗ್ರಾಮದ ನಿವಾಸಿ ಸತೀಶ್ ಎಂಬವರು 2019ರ ಏಪ್ರಿಲ್ 4ರಂದು ತಮ್ಮ ಹೆಂಡತಿ ರೇಖಾಳನ್ನು ಬೆಡ್ಶೀಟ್ನಿಂದ ಮುಖ ಮುಚ್ಚಿ ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಪ್ರೀತಿಸಿ ಮದುವೆಯಾದ ಈ ದಂಪತಿಯ ಜೀವನದಲ್ಲಿ ಮೊದಲಿನಿಂದಲೇ ಸೌಹಾರ್ದವಿತ್ತು. ಆದರೆ, ಎರಡನೇ ಬಾರಿ ಗರ್ಭಿಣಿಯಾಗಿದ್ದ ವೇಳೆ ವರದಕ್ಷಿಣೆಗಾಗಿ ಅತ್ತೆ-ಮಾವಂದಿರ ಒತ್ತಾಯ ಹೆಚ್ಚಾಗಿ, ಪೀಡನೆಯೂ ಆರಂಭವಾಗಿತ್ತು.
ರೇಖಾ ಮೊದಲ ಬಾರಿ ತಂದೆಯಿಂದ 45 ಸಾವಿರ ರೂ. ಮತ್ತು ನಂತರ ಮತ್ತೆ 15 ಸಾವಿರ ರೂ. ತಂದುಕೊಟ್ಟರೂ ಸತೀಶ್ನ ಹಿಂಸೆ ನಿಲ್ಲಲಿಲ್ಲ. ಕೊನೆಗೆ 2019ರಲ್ಲಿ ಈ ಹೃದಯವಿದ್ರಾವಕ ಘಟನೆ ಸಂಭವಿಸಿತು.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಎಸ್.ಎ. ಹಿದಾಯತ್ ಉಲ್ಲಾ ಷರೀಫ್ ಅವರು ವಿಚಾರಣೆ ನಡೆಸಿದರು. ಪತಿ ಸತೀಶ್ನ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆ, 25 ಸಾವಿರ ರೂ. ದಂಡ ಹಾಗೂ ಹೆಣ್ಣು ಮಗುವಿನ ಪಾಲನೆಗಾಗಿ 3 ಲಕ್ಷ ರೂ. ಪರಿಹಾರ ನೀಡುವಂತೆ ಬುಧವಾರ ತೀರ್ಪು ಪ್ರಕಟಿಸಿದರು.
ಸರ್ಕಾರದ ಪರವಾಗಿ ಅಪರಾಧ ನಿವಾರಣಾಧಿಕಾರಿ ಕೆ.ಎಸ್. ನಾಗೇಂದ್ರ ವಾದ ಮಂಡಿಸಿದರು.
